ಉಪ ಚುನಾವಣೆ ಗದ್ದಲ ಮುಗಿಯುತ್ತಿದ್ದಂತೆಯೇ ಆಡಳಿತಕ್ಕೆ ಚುರುಕು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ ಮಾಸದಲ್ಲಿ ಸಂಪುಟ ಪುನಾರಚನೆಗೆ ಕೈ ಹಾಕುವ ಹಾಗೂ ಆಡಳಿತ ಯಂತ್ರದಲ್ಲಿ ಭಾರಿ ಬದಲಾವಣೆ ತರುವ ಸಾಧ್ಯತೆಗಳಿವೆ.
ಹಾಲಿ ಸಂಪುಟದಲ್ಲಿ ತೀವ್ರ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ನಿಷ್ಕ್ರಿಯರಾಗಿದ್ದಾರೆ ಎನ್ನಲಾದ ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಎನ್. ರಾಜಣ್ಣ, ಬೋಸರಾಜು ಮೊದಲಾದ ಆರೇಳು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸದ, ಭ್ರಷ್ಟಾಚಾರದ ಆರೋಪಗಳಿರುವ, ವಿವಾದಾತ್ಮಕ ಹೇಳಿಕೆ ನೀಡುತ್ತಾ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಕುಂದುವಂತೆ ಮಾಡಿದ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಲು ಮುಹೂರ್ತ ನಿಗದಿ ಮಾಡಲಾಗಿದೆ.
ಸಂಪುಟ ಪುನಾರಚನೆಗೂ ಮುನ್ನ ವಾಲ್ಮೀಕಿ ಹಗರಣದಿಂದ ಬಿ. ನಾಗೇಂದ್ರ ದೋಷಮುಕ್ತರಾದರೆ ವಾಪಸು ಸಚಿವ ಸಂಪುಟ ಸೇರುವ ಲಕಣಗಳಿವೆ. ಹೊಸಬರಿಗೆ ಮಣೆ ಹಾಕಲು ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಭಾರಿ ಆಡಳಿತಾತ್ಮಕ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಮುಖ್ಯಮಂತ್ರಿ ಕಚೇರಿಯ ಅಧಿಕಾರಿ ವರ್ಗವನ್ನು ಬದಲಾಯಿಸುವ ಚಿಂತನೆ ಮುಖ್ಯಮಂತ್ರಿ ಯವರಿಗೆ ಇದೆ ಎಂದು ಮೂಲಗಳು ಹೇಳಿವೆ.
ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ: ಸಿಎಂ ಸಿದ್ದು ಸ್ಪಷ್ಟ ಸುಳಿವು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದು ಕೊಂಡು ಜೈಲು ಪಾಲಾಗಿದ್ದ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಸುಳಿವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಎಚ್.ಡಿ.ಕೋಟೆಯ ಕಾರ್ ಕ್ರಮದಲ್ಲಿ ಮುಖಂಡರು, ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅನಿಲ್ ಚಿಕ್ಕಮಾದುಗೆ ಸ್ಥಾನ ಕೊಡಲು ಸಾಧ್ಯವಿಲ್ಲ. ಸುಮ್ಮನೆ ಸುಳ್ಳು ಹೇಳಲ್ಲ. ಆದರೆ, ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡಬೇಕು, ಕೊಡ್ತೀನಿ ಎಂದರು