1,20,000 ಕೋಟಿ ಹಣವನ್ನು ಈ ವರ್ಷ ನಾವು ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಇದಲ್ಲದೆ 52,000 ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ ಹಾಕುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ₹200 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಸಿರಿಧಾನ್ಯ ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 1,20,000 ಕೋಟಿ ಹಣವನ್ನು ಈ ವರ್ಷ ನಾವು ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ.
ಇದಲ್ಲದೆ 52,000 ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ ಹಾಕುತ್ತಿದ್ದೇವೆ. ಹೀಗಿದ್ದೂ ಬಿಜೆಪಿ ಬುರುಡೆ ಬಿಡುತ್ತಿದೆ. ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಪದೇ ಪದೇ ಸುಳ್ಳು ಹೇಳಿ ಅವರ ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ರಾಜ್ಯದ ಜನತೆ ಇವರ ಸುಳ್ಳು ನಂಬುವಷ್ಟು ಮೂರ್ಖರಲ್ಲ.
ರಾಜ್ಯದ 4.5 ಕೋಟಿ ಮಂದಿ ಗ್ಯಾರಂಟಿ ಯೋಜನೆಗಳ ನೇರ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ ರಸ್ತೆ, ನೀರು, ಕೃಷಿ, ನೀರಾವರಿ ಯೋಜನೆಗಳಿಗೂ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದೇವೆ. ಸಮಾಜ ಕಲ್ಯಾಣಕ್ಕೆ, ದಲಿತ ಸಮುದಾಯದ ಪ್ರಗತಿಗೆ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಸಾವಿರ ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಆದರೆ ಬಿಜೆಪಿ ಜಾತಿ-ಧರ್ಮದ ನಡುವೆ ದ್ವೇಷ ಹರಡಿ, ಜನರನ್ನು ವಿಭಜಿಸುವ ರಾಜಕಾರಣದಲ್ಲಿ ತೊಡಗಿದೆ.
ಬಸವಣ್ಣ, ಅಂಬೇಡ್ಕರ್, ಗಾಂಧಿ, ಬುದ್ಧ ಎಲ್ಲರ ಆಶಯದಂತೆ ಸಮ ಸಮಾಜವನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿ, ಜಾರಿ ಮಾಡುತ್ತಿದೆ. ಆದರೆ ಸಮಾಜದಲ್ಲಿರುವ ಅಸಮಾನತೆಯ ಅತಿಹೆಚ್ಚು ಲಾಭ ಪಡೆಯುತ್ತಿರುವ ಬಿಜೆಪಿ, ಸಮಾನತೆಯ ವಿರೋಧಿಯಾಗಿದೆ.
ಗಜೇಂದ್ರಘಡದ ಅತ್ತೆ ಸೊಸೆ ಇಬ್ಬರೂ ಗೃಹಲಕ್ಷ್ಮಿ ಹಣವನ್ನು ಉಳಿಸಿ ಅದರಲ್ಲಿ ಬೋರ್ ವೆಲ್ ಕೊರೆಸಿ ಸಮಾಜಕ್ಕೆ ಮಾದರಿ ಆಗಿದ್ದಾರೆ. ಇಡೀ ಜಗತ್ತಿನಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಹೆಚ್ಚಿನ ನಾರಿನ ಅಂಶ ಇರುವ ಸಿರಿಧಾನ್ಯ ಬಳಸುವುದರಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ದೇಹಕ್ಕೆ ಅಗತ್ಯವಾದ ಪ್ರೋಟೀನ್ ಹೇರಳವಾಗಿ ಸಿಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಸಿರಿಧಾನ್ಯ ಬೆಳೆಯುವ ರೈತರಿಗೆ ನಾನಾ ರೀತಿಯ ಅನುಕೂಲ ಮಾಡಿಕೊಡುತ್ತಿದೆ.
ಜೆ.ಎಸ್.ಪಾಟೀಲ್ ಅವರು ನನ್ನ ಬಳಿ ಬರುವುದು ರೋಣಾ ಮತ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಮಾತ್ರ. ಮುಂದಿನ ಬಜೆಟ್ ನಲ್ಲಿ ಕ್ಷೇತ್ರಕ್ಕೆ ಕೃಷಿ ಕಾಲೇಜು ನೀಡುವಂತೆ ಪಾಟೀಲರು ಒತ್ತಾಯಿಸಿದ್ದಾರೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಕ್ಷೇತ್ರದ ಜನತೆ ಒತ್ತಾಯಿಸಿದ್ದಾರೆ. ಜೆ.ಎಸ್.ಪಾಟೀಲರಿಗೆ ಮಂತ್ರಿ ಆಗುವ ಎಲ್ಲಾ ಅರ್ಹತೆಗಳಿವೆ. ಎರಡೂ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.