ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಸರಣಿ ರಸ್ತೆ ಅಪಘಾತ ವಿಧಿಯಾಟವೇ ಹಾಗೆ, ಈಗಿದ್ದ ಜೀವ ಇನ್ನೊಂದು ಕ್ಷಣದಲ್ಲಿ ಇರುತ್ತೆ ಅಂತಾ ಹೇಳುವುದಕ್ಕೆ ಆಗಲ್ಲ. ಇದೇ ರೀತಿಯ ಘಟನೆಯೊಂದು ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ಯಮಸ್ವರೂಪಿಯಾಗಿ ಬಂದ ಕಂಟೇನರ್ವೊಂದು ಇಡೀ ಕುಟುಂಬದ 6 ಜೀವಗಳನ್ನು ಬಲಿ ಪಡೆದಿರುವಂತಹ ಘಟನೆ ನಡೆದಿದೆ. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ಊರಿಗೆ ಹೊರಟಿದ್ದವರು ಮಸಣ ಸೇರಿದ್ದಾರೆ.
ಪತಿ ಚಂದ್ರಮ್ ಏಗಪ್ಪಗೋಳ್(46), ಪತ್ನಿ ಧೋರಾಬಾಯಿ(40), ಪುತ್ರ ಗ್ಯಾನ್(16), ಪುತ್ರಿಯರಾದ ದೀಕ್ಷಾ(10), ಆರ್ಯ(6) ಚಂದ್ರಮ್ ಏಗಪ್ಪಗೋಳ್ ಸಹೋದರನ ಪತ್ನಿ ವಿಜಯಲಕ್ಷ್ಮೀ(35) ಮೃತಪಟ್ಟವರು.
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದರು. ಐಎಎಸ್ಟಿ ಸಾಫ್ಟ್‌ವೇರ್ ಕಂಪನಿ ಮಾಲೀಕರಾಗಿದ್ದರು. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ವಿಜಯಪುರಕ್ಕೆ ಹೊರಟಿದ್ದರು.
ಬೆಂಗಳೂರಿನ ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಪಕ್ಕದ ರಸ್ತೆಯಿಂದ ಏಕಾಏಕಿ ಮೇಲೆರಗಿ ಬಂದ ಕಂಟೇನರ್ ಚಂದ್ರಮ್ ಕುಟುಂಬ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಬಿದ್ದಿತ್ತು. ಲಾರಿ ಬಿದ್ದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದ್ದು, ಕಾರಿನಲ್ಲಿದ್ದ 6 ಜೀವಗಳು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿವೆ.
ಇಂದು ಬೆಳಿಗ್ಗೆ 11 ಗಂಟೆಗೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ತುಮಕೂರು ಕಡೆಯಿಂದ ವೇಗವಾಗಿ ಬಂದ ಕಂಟೇನರ್ ಡಿವೈಡರ್ಗೆ ಡಿಕ್ಕಿಹೊಡೆದ ರಭಸಕ್ಕೆ ಆಪೋಸಿಟ್ ರೋಡ್ಗೆ ಉರುಳಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ ಕುಟುಂಬ ಸಮೇತ ತೆರಳುತ್ತಿದ್ದ ಕಾರಿನ ಮೇಲೆ ಕಂಟೇನರ್ ಉರಳಿದ್ದು, ಸ್ಥಳದಲ್ಲೇ 6 ಜನ ದಾರುಣ ಸಾವನ್ನಪ್ಪಿದ್ದಾರೆ.
ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳೀಯರ ಸಹಾಯವನ್ನ ಪಡೆದುಕೊಂಡು ಮೂರು ಕ್ರೇನ್ಗಳ ಸಹಾಯದಿಂದ ಕಂಟೇನರ್ ಎತ್ತಿದ್ದಾರೆ. ಇನ್ನು ಕಂಟೇನರ್ ಡ್ರೈವರ್ ಕೂಡ ಗಂಭೀರ ಗಾಯಗೊಂಡಿದ್ದು, ಆತನನ್ನು ಕೂಡ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾರಿ ಚಾಲಕ ಆರೀಫ್ ಅನ್ಸಾರಿ ಪ್ರತಿಕ್ರಿಯಿಸಿದ್ದು, ದಾಬಸ್ ಪೇಟೆ ಜಿಂದಾಲ್ ಕಂಪನಿಯಿಂದ ಅಲ್ಯುಮಿನಿಯಂ ವಸ್ತುಗಳನ್ನು ತುಂಬಿಕೊಂಡು ಬೆಂಗಳೂರಿನ ಜಿಂದಾಲ್ ಕಂಪನಿಗೆ ಬರುವ ವೇಳೆ ಭೀಕರ ಅಪಘಾತ ಆಗಿದೆ. ಕಂಟೇನರ್ ಮುಂದೆ ಏಕಾಏಕಿ ಬಂದಿದ್ದ ಕಾರನ್ನು ತಪ್ಪಿಸಲು ಹೋಗಿ ನನ್ನ ಕಂಟೇನರ್ ನಿಯಂತ್ರಣ ತಪ್ಪು ಡಿವೈಡರ್ ಹಾರಿ ಮತ್ತೊಂದು ರಸ್ತೆ ನುಗ್ಗಿ ಲಾರಿಗೆ ಡಿಕ್ಕಿ ಆಯಿತು. ಆಗ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಮತ್ತೆ ನನಗೆ ಏನಾಯಿತು ಗೊತ್ತಿಲ್ಲ, ಆಸ್ಪತ್ರೆಗೆ ಬಂದಾಗ ನನಗೆ ಎಚ್ಚರಿಕೆ ಆಗಿದೆ ಎಂದಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ಬಳಿಕ ಕೇಂದ್ರವಲಯ ಐಜಿಪಿ ಲಾಬೂರಾಮ್ ಹೇಳಿಕೆ ನೀಡಿದ್ದು, ವೋಲ್ವೋ ಕಾರಿನಲ್ಲಿ ತೆರಳುತ್ತಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾರ ತಪ್ಪು ಅನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.