ಜಾಲ ತಾಣಗಳ ಮೂಲಕ ನಡೆಯುವ ವಂಚನೆಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ. ಇತ್ತೀಚೆಗೆ ಮ್ಯಾಟ್ರಿಮೋನಿ ತಾಣಗಳ ಮೂಲಕ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಕಾನ್ಸ್ಟೇಬಲ್ ಮಹಿಳೆಯೊಬ್ಬರು ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿಯಿಂದ 18 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ. ಸಂತ್ರಸ್ತೆಯು ಅವರು ಕನ್ನಡ ಮ್ಯಾಟ್ರಿಮೋನಿ ಮತ್ತು ಯಾದವ ಮ್ಯಾಟ್ರಿಮೋನಿ ತಾಣಗಳಲ್ಲಿ ಜೀವನ ಸಂಗಾತಿಯನ್ನು ಹುಡುಕುತ್ತಿರುವಾಗ ಅಶೋಕ್ ಮುಸ್ತಿ ಎಂಬಾತ ಪರಿಚಯವಾಗಿದ್ದಾನೆ. ತೆಲಂಗಾಣ ಮೂಲದವನಾದ ಆತ, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಮಾಡುತ್ತಿದ್ದೇನೆ ಎಂದು ನಂಬಿಸಿ, ಮದುವೆ ಮಾತುಕತೆ ಮುಗಿಸಿ ವಂಚನೆ ಎಸಗಿದ್ದಾನೆ.
ಮದುವೆಯಾಗುವ ನೆಪದಲ್ಲಿ ಆಗಾಗ ಮನೆಗೂ ಬರುತ್ತಿದ್ದ ಆರೋಪಿ, ಮದುವೆಗಾಗಿ ವರದಕ್ಷಿಣೆ ಹಣವಾಗಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಮೋಸದ ಜಾಲದ ಅರಿವಾಗದ ಸಂತ್ರಸ್ತೆ ಯುವಕ ಹೇಳಿದ ಬ್ಯಾಂಕ್ ಖಾತೆಗೆ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.
ಆದರೆ ಆ ನಂತರ ಆತ ಒಂದಲ್ಲ ಒಂದು ರೀತಿಯಲ್ಲಿ ತಡಮಾಡಿ, ನಂತರ ಮದುವೆ ನಿರಾಕರಿಸಿದ್ದ. ಈ ಬಗ್ಗೆ ಸಂತ್ರಸ್ತೆ ಅಳಲುತೋಡಿಕೊಂಡಿದ್ದು, ನನ್ನ ಹಣವನ್ನೂ ವಾಪಸ್ ಕೊಡದೇ, ಮೊಬೈಲ್ ಕರೆ ಸ್ವೀಕರಿಸದೆ ನನ್ನನ್ನು ಮೋಸ ಮಾಡಿದ್ದಾನೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ತೆಲಂಗಾಣದ ಅಶೋಕ್ ಮುಸ್ತಿ ಮತ್ತು ಆತನ ಕುಟುಂಬದವರ ವಿರುದ್ಧ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಅಶೋಕ್ ಹಾಗೂ ಆತನ ಸಂಬಂಧಿಕರು 18 ಲಕ್ಷ ರೂ. ಪಡೆದಿದ್ದು, ಇದೀಗ ಒಬ್ಬರಾಗಿ ಈಕೆಯ ಜೋತೆ ಸಂಪರ್ಕ ಕಡಿದುಕೊಂಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಾಬಸ್ ಪೇಟೆ ಪೊಲೀಸರು ಸಂತ್ರಸ್ತೆಯ ದೂರಿನಂತೆ ಐಪಿಸಿ ಸೆಕ್ಷನ್ 318, 321, 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.