ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಮುಂದಿನ ಅಕ್ಟೋಬರ್ 2 ಕ್ಕೆ 20 ವರ್ಷಗಳು ಪೂರ್ಣಗೊಳ್ಳುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಪುತ್ತೂರು ತಾಲೂಕಿನಾದ್ಯಂತ ಹತ್ತು ದಿನಗಳ ಕಾಲದ ಸ್ವಚ್ಛತಾ ಅಭಿಯಾನ ಜನವರಿ 21 ರಿಂದ ಆರಂಭಗೊಂಡಿದೆ. ಜನವರಿ 31 ರವರೆಗೆ ಭರದಿಂದ ನಡೆದಿದೆ. ಪುತ್ತೂರು ತಾಲೂಕು ಪಂಚಾಯತ್, ಪುತ್ತೂರು ನಗರಸಭೆ, ಗ್ರಾಮ ಪಂಚಾಯತ್‌ಗಳು, ವಿವಿಧ ಸಂಘ ಸಂಸ್ಥೆಗಳು ಸ್ವಚ್ಛ ಪುತ್ತೂರಿನ ಸಂಕಲ್ಪದೊಂದಿಗೆ ಆರೋಗ್ಯಕರ ಸಮಾಜದ ನಿರ್ಮಾಣದ ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ಸ್ವಚ್ಛತೆಯಲ್ಲಿ ಪುತ್ತೂರನ್ನು ಮಾದರಿ ತಾಲೂಕನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ.
ಇದೀಗ ಪುತ್ತೂರಿನಲ್ಲಿ ಹಮ್ಮಿಕೊಂಡಿರುವ ಸ್ವಚ್ಛತೆಗಾಗಿ ವಿಶೇಷ ಮಹಾ ಶ್ರಮದಾನ, ಶೂನ್ಯ ಕಸ ನಿರ್ವಹಣೆಯ ಲಕ್ಷಣಕ್ಕೆ ಮೂಲವಾಗುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ, ಸ್ವಚ್ಛತೆಗೆ ಸತ್ಯ-ಸಂವಾದ ನಡೆಯಬೇಕಾಗಿದೆ. ಇದು ಯಾರದೋ ಕೆಲಸ ಅಲ್ಲ. ನಮ್ಮ ಕೆಲಸ. ಹಾಗಾಗಿ ಪ್ರತೀ ಮನೆಯವರೂ ಸ್ವಚ್ಛ ಮನೆ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಅವರು ನಗರಸಭೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಿಕ್ಷಾ ಚಾಲಕರ ಜತೆ ಬೀದಿಗಿಳಿದು ಕಸ-ಕಡ್ಡಿಗಳನ್ನು ಆಯುವ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ನಿಟ್ಟಿನಲ್ಲಿ ಪೌರಾಯುಕ್ತ ಮಧು ಎಸ್. ಮನೋಹರ್ ಅವರ ಪರಿಶ್ರಮವೂ ಶ್ಲಾಘನೀಯವಾಗಿದೆ.