ಪುತ್ತೂರು; ದೇವಳದ ಅಭಿವೃದ್ಧಿಗೆ ಪೂರಕವಾಗಿ ನಿಲ್ಲಬೇಕಾದ ಹಿಂದೂಪರ ನಾಯಕರಾಗಿದ್ದ ರಾಜೇಶ್ ಬನ್ನೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಮೇಲೆ ಕೇಸು ದಾಖಲಿಸಿರುವುದು ಹಾಗೂ ಶಾಸಕ ಅಶೋಕ್ ರೈ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವುದು ಖಂಡನೀಯ ಎಂದು ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ದೇವಳದ ಜಾಗದಲ್ಲಿ ವಾಸ್ತವ್ಯವಿದ್ದ ಬಡವರು ಕೂಡಾ ದೇವಳದ ಅಭಿವೃದ್ಧಿಗೆ ತಮ್ಮ ವಾಸ್ತವ್ಯದ ಮನೆಗಳನ್ನು ತೆರವು ಮಾಡುವ ಮೂಲಕ ಸಾಥ್ ಕೊಟ್ಟಿದ್ದಾರೆ. ಆದರೆ ಸರ್ವೆಯಲ್ಲಿ ಅಕ್ರಮಸಕ್ರಮದಡಿಯಲ್ಲಿ ಜಾಗ ಹೊಂದಿರುವ, ಬೊಳುವಾರಿನಲ್ಲಿ ಸುಸಜ್ಜಿತ ಮನೆ ಹೊಂದಿರುವ ರಾಜೇಶ್ ಬನ್ನೂರು ದೇವಳದ ವಿಚಾರದಲ್ಲಿ ಮಾಡಿರುವ `ಉದ್ದಟತನ’ ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ಅವರ ಸರ್ಕಾರ ಬಂದ ಬಳಿಕ 11849 ಎಕರೆ ಸ್ಥಳವನ್ನು ದೇವಳಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ.
ಹಿಂದುತ್ವದ ಬಗ್ಗೆ ಮಾತನಾಡುವವರೇ ದೇವಳದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಪುತ್ತೂರು ದೇವಳದ ಜಾಗದಲ್ಲಿಯೂ ಇದ್ದ ಕುಟುಂಬಗಳು ಅಭಿವೃದ್ಧಿ ಹಿನ್ನಲೆಯಲ್ಲಿ ತಾವಿದ್ದ ದೇವಳದ ಸ್ಥಳವನ್ನು ಸ್ವಂತ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ. ಆದರೆ ಸದಾ ಹಿಂದುತ್ವದ ಬಗ್ಗೆ ಮಾತನಾಡುವ ರಾಜೇಶ್ ಬನ್ನೂರು ಅಭಿವೃದ್ಧಿಗೆ ತಡೆ ಒಡ್ಡುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ. ಎಂದು ಅವರು ಪ್ರಶ್ನಿಸಿದರು. ದೇವಳದ ಜಾಗದಲ್ಲಿದ್ದ ಎಲ್ಲಾ ಕುಟುಂಬಗಳನ್ನು ಒಟ್ಟಿಗೆ ಸೇರಿಸಿಕೊಂಡು ದೇವಳದ ಅಭಿವೃದ್ಧಿಗಾಗಿ ನಾವು ಮನೆಗಳನ್ನು ತೆರವು ಮಾಡಬೇಕು ಎಂದು ಹೇಳಬೇಕಾಗಿದ್ದ ವ್ಯಕ್ತಿ ಅವರಾಗಿದ್ದರು. ಈ ರೀತಿ ಮಾಡುತ್ತಿದ್ದರೆ ಅವರು ಗೌರವದ ಸ್ಥಾನ ಪಡೆಯುತ್ತಿದ್ದರು ಎಂದು ಅವರು ಹೇಳಿದರು.
ದೈವ-ದೇವಳಗಳಿಗೆ ಪಹಣಿ
ಧಾರ್ಮಿಕ ಪರಿಷತ್ ಮೂಲಕ ದೈವ-ದೇವಳಗಳ ಜಾಗಗಳಿಗೆ ಪಹಣಿ ನೀಡುವ ಕಾರ್ಯ ನಡೆಸಲು ಮುಂದಾಗಿದ್ದೇವೆ. ಸರ್ಕಾರಿ ಜಾಗದಲ್ಲಿರುವ ದೇವಳ ಹಾಗೂ ದೈವಗಳ ಗುಡಿಗಳಿಗೆ ಈ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದೇವರ ಹುಂಡಿಗೆ ಹಣ ಹಾಕಬೇಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಒಂದು ದೇವಳಕ್ಕೆ ವರ್ಷಕ್ಕೆ ಸುಮಾರು 60 ಸಾವಿರ ಖರ್ಚಿದೆ. ದೇವಳದ ಹುಂಡಿಗೆ ಹಾಕುವ ಹಣ ಎಲ್ಲಿಗೂ ಹೋಗುವುದಿಲ್ಲ. ದೇವಳದ ವೆಚ್ಚಕ್ಕೆ ಬಳಕೆಯಾಗುತ್ತಿದೆ. ಹಾಗಾಗಿ ಯಾವ ಭಕ್ತನೂ ಹುಂಡಿಗೆ ಹಣ ಹಾಕಬೇಡಿ. ಅದು ಯಾರದೋ ಪಾಲಾಗುತ್ತದೆ ಎಂಬ ಅಪಪ್ರಚಾರ ಮಾಡಬೇಡಿ ಎಂದು ಅವರು ವಿನಂತಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೋಡಿಂಬಾಡಿ ಮಹಿಷಮರ್ದಿನಿ ದೇವಳದ ನಿರಂಜನ ರೈ ಮಠಂತಬೆಟ್ಟು, ಮಹೇಶ್ಚಂದ್ರ ಸಾಲಿಯಾನ್, ರಮೇಶ್ ಡಿಂಬ್ರಿ ಉಪಸ್ಥಿತರಿದ್ದರು.