ಉತ್ತರ ಪ್ರದೇಶ: ವರದಕ್ಷಿಣೆಯಾಗಿ 10 ಲಕ್ಷ ರೂ. ಹಾಗೂ ಎಸ್ಯುವಿ ಕಾರು ಕೊಟ್ಟಿಲ್ಲವೆಂದು ಅತ್ತೆ-ಮಾವ ಸೊಸೆಗೆ ಎಚ್‌ಐವಿ ಸೋಂಕಿತ ಸೂಜಿ ಚುಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 30 ವರ್ಷದ ಮಹಿಳೆಗೆ ಸಂಬಂಧಿಸಿದ ಈ ಘಟನೆಯಲ್ಲಿ ದೂರು ದಾಖಲಿಸುವಂತೆ ಸಹರಾನ್ಪುರ ನ್ಯಾಯಾಲಯವು ಉತ್ತರ ಪ್ರದೇಶದ ಪೊಲೀಸರಿಗೆ ಆದೇಶಿಸಿದೆ.
ಮಹಿಳೆ ಸಹರಾನ್ಪುರ ನಿವಾಸಿ, ಆಕೆಯ ಪತಿ, ಅತ್ತೆ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಐಪಿಸಿ 307, 498ಎ, 323, 328, 406 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಪ್ರಕಾರ, ಈ ಘಟನೆ ಮೇ 2024 ರಲ್ಲಿ ಹರಿದ್ವಾರದಲ್ಲಿರುವ ಮಹಿಳೆಯ ಅತ್ತೆಯ ಮನೆಯಲ್ಲಿ ನಡೆದಿತ್ತು.
ಸಂತ್ರಸ್ತೆಯ ತಂದೆ ಮಾತನಾಡಿ, 2023ರಲ್ಲಿ ತಮ್ಮ ಮಗಳ ಮದುವೆ ಮಾಡಿಕೊಟ್ಟಿದ್ದೆವು, ಮದುವೆಗೆ 45 ಲಕ್ಷ ರೂ. ಖರ್ಚು ಮಾಡಿದ್ದೆವು. ವರನ ಕುಟುಂಬಕ್ಕೆ 15 ಲಕ್ಷ ರೂ. ನಗದು ಹಾಗೂ ಸಬ್-ಕಾಂಪ್ಯಾಕ್ಟ್ ಎಸ್ಯುವಿ ನೀಡಿದ್ದೇವೆ, ಆದರೆ ಅವರು ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ನಗದು ಮತ್ತು ದೊಡ್ಡ ಎಸ್ಯುವಿ ಕೇಳಿದ್ದಾರೆ ಎಂದು ತಮದೆ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮದುವೆಯಾದ ತಕ್ಷಣ ಆಕೆಗೆ ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದ್ದರು, ಮಗಳನ್ನು ಅವಮಾನಿಸಿದರು, ಮಗನಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿದರು. ಮಾರ್ಚ್ 25, 2023ರಂದು ಆಕೆಯನ್ನು ಮನೆಯಿಂದ ಹೊರಹಾಕಲಾಯಿತು. ಮೂರು ತಿಂಗಳುಗಳ ಕಾಲ ನಮ್ಮೊಂದಿಗೆ ಇದ್ದಳು, ನಂತರ ಹೇಗೋ ಮಾತನಾಡಿ ಆಕೆಯ ಗಂಡನ ಮನೆಗೆ ಕಳುಹಿಸಲಾಯಿತು. ಬಳಿಕ ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಯಿತು.
2024ರ ಮೇನಲ್ಲಿ ಆಕೆಯ ಅತ್ತೆ ಮಾವ ಬಲವಂತವಾಗಿ ಆಕೆಗೆ ಎಚ್‌ಐವಿ ಸೋಂಕಿತ ಸಿರಿಂಜ್ ಅನ್ನು ಚುಚ್ಚಿದ್ದರು. ಆಕೆಯ ಆರೋಗ್ಯ ಶೀಘ್ರವಾಗಿ ಹದಗೆಟ್ಟಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಆಕೆ ಎಚ್‌ಐವಿ ಪಾಸಿಟಿವ್ ಆಗಿರುವುದು ತಿಳಿದುಬಂದಿತ್ತು. ಆದರೆ ಆಕೆಯ ಪತಿಗೆ ಎಚ್‌ಐವಿ-ನೆಗೆಟಿವ್ ಕಂಡುಬಂದಿದೆ.