ನೆಲ್ಯಾಡಿ: ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲದ ಹಾಗೂ ಕೃಷಿ ಹಾನಿಯಾಗುತ್ತಿರುವ ಬಗ್ಗೆ ಸೂಕ್ತ ದಾಖಲೆ ನೀಡಿರುವ ಕಡಬ, ಸುಳ್ಯ ತಾಲೂಕಿನ ಸಹಿತ ದ.ಕ.ಜಿಲ್ಲೆಯ 196 ಮಂದಿಗೆ ಆಯುಧ ಠೇವಣಿ ಇರಿಸುವುದರಿಂದ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಒಳಗೊಂಡ ದ.ಕ.ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿ ಎ.18ರಂದು ಆದೇಶ ಹೊರಡಿಸಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣೆಯ ಅವಧಿಯಲ್ಲಿ ಶಾತಿ ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಎಲ್ಲಾ ಆಯುಧ ಪರವಾನಿಗೆದಾರರಿಗೆ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್ ಠಾಣೆ ಅಥವಾ ಅಧಿಕೃತ ಕೋವಿ ಮುದ್ದುಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡುವಂತೆ ಮಾ.18ರಂದು ಆದೇಶ ಹೊರಡಿಸಲಾಗಿತ್ತು. ಈ ಮಧ್ಯೆ ದ.ಕ.ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಠೇವಣಿ ಇಡುವುದರಿಂದ ವಿನಾಯಿತಿ ಕೋರಿ ಪರವಾನಿಗೆದಾರರು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ದ.ಕ.ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಆಯುಧಗಳ ಠೇವಣಾತಿಯಿಂದ ವಿನಾಯಿತಿ ಕೋರಿ ಬಂದ ಅರ್ಜಿಗಳನ್ನು ನಾಲ್ಕು ಹಂತಗಳಲ್ಲಿ ಪರಿಶೀಲಿಸಿ ನಿಗದಿತ ಸಮಯದೊಳಗೆ ವಿಲೇವಾರಿಯನ್ನು ಮಾಡಿದೆ. ಈ ನಡುವೆ ಸ್ಕ್ರೀನಿಂಗ್ ಸಮಿತಿಯ ಆದೇಶದ ವಿರುದ್ಧ ಜಿಲ್ಲೆಯ ಹಲವಾರು ಆಯುಧ ಪರವಾನಿಗೆದಾರರೂ ಹೈಕೋರ‍್ಟ್‌ನಲ್ಲಿ ದಾವೆಯನ್ನು ಹೂಡಿದ್ದರು.