ಪ್ರಯಾಗ್ ರಾಜ್: ಅಘೋರಿಗಳ, ನಾಗಸಾಧುಗಳ, ಸಾಧು ಸಂತರುಗಳ ಪಾದ ಸ್ಪರ್ಶಗೊಂಡ ಪುಣ್ಯಭೂಮಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಅಂತಿಮ ದಿನವಾದ ಮಹಾಶಿವರಾತ್ರಿಯಂದು ಅರುಣ್ ಕುಮಾರ್ ಪುತ್ತಿಲ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
144 ವರ್ಷಗಳಿಗೊಮ್ಮೆ ನಡೆಯುವ ಈ ಐತಿಹಾಸಿಕ ಮಹಾಕುಂಭಮೇಳದ ಕೊನೆಯ ದಿನವಾದ ಮಹಾಶಿವರಾತ್ರಿಯಂದು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಅರುಣ್ ಪುತ್ತಿಲ, ಪ್ರಯಾಗ್‌ರಾಜ್‌ನ ಈ ಮಹಾ ಕುಂಭದಲ್ಲಿ ಪವಿತ್ರ ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರ ಜೊತೆ ಪಾಲ್ಗೊಳ್ಳಲು ನನಗೆ ಸೌಭಾಗ್ಯ ಸಿಕ್ಕಿರುವುದೇ ಖುಷಿಯ ವಿಷಯ. ತ್ರಿವೇಣಿ ಸಂಗಮದಲ್ಲಿ ಮಿಂದದ್ದು ಮರೆಯಲಾಗದ ಅದ್ಬುತ ಆಧ್ಯಾತ್ಮಿಕ ಅನುಭವ. ಈ ಪುಣ್ಯಸ್ನಾನದಿಂದ ನವ ಚೈತನ್ಯ ಮೂಡಿಸಿದೆ. ಕೇಂದ್ರದ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ವಿಶ್ವದ ಅತಿದೊಡ್ಡ ಧಾರ್ಮಿಕ-ಆಧ್ಯಾತ್ಮಿಕ-ಸಾಂಸ್ಕೃತಿಕ ಸಂಗಮ ಮಹಾ ಕುಂಭಮೇಳವನ್ನು ಅಚ್ಚುಕಟ್ಟಾಗಿ ನಡೆಸಿದೆ.
ವಿಶ್ವದ ಅತೀದೊಡ್ಡ ಹಬ್ಬವೆಂಬ ಹೆಗ್ಗಳಿಕೆಗೆ ನಮ್ಮ ಸನಾತನ ಧರ್ಮದ ಮಹಾಕುಂಭಮೇಳ ಸಾಕ್ಷಿಕರಿಸಿದೆ ಎನ್ನುವುದು ಹಿಂದೂಗಳಿಗೆ ಹೆಮ್ಮೆಯ ಸಂಗತಿ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಲ್ಲಿಗೆ ಬರುತ್ತಿರುವ 65 ಕೋಟಿಗೂ ಮಿಕ್ಕಿ ಭಕ್ತಾದಿಗಳಿಗೆ ಅದ್ಭುತ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಪುತ್ತಿಲ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.