ಪುತ್ತೂರು: ಹಲವು ವರ್ಷಗಳಿಂದ ಮೇಲ್ದರ್ಜೆಗೇರುವ ಕನಸಲ್ಲೇ ದಿನದೂಡುತ್ತಿದ್ದ ಪುತ್ತೂರು ತಾಲೂಕು ಆಸ್ಪತ್ರೆಗೂ ಪ್ರಗತಿಯ ಯೋಗ ಕೂಡಿ ಬಂದಿದೆ.
ಬಜೆಟ್ ನಲ್ಲಿ ಮೆಡಿಕಲ್ ಕಾಲೇಜು ಮಂಜೂರಾಗಿರುವ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯನ್ನು 100 ಹಾಸಿ ಗೆಯಿಂದ 300 ಹಾಸಿಗೆ ಸಾಮರ್ಥ್ಯಕ್ಕೆ ಏರಿಸುವ ಸಾಧ್ಯತೆ ಇದೆ. ಇದಾದ ಬಳಿಕ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಡಿ ಇಡಬೇಕು. ತಾಲೂಕು ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಳಕ್ಕೆ ಕೂಡಲೇ ಆರ್ಥಿಕ, ತಾಂತ್ರಿಕ ಮಂಜೂರಾತಿಗೆ ಪ್ರಯತ್ನಿಸಬೇಕಿದೆ.
ಮಂಡಲ ಉಸ್ತುವಾರಿಯಲ್ಲಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಆಸ್ಪತ್ರೆ 1928ರಲ್ಲಿ 25 ಬೆಡ್‌ಗಳ ಸರಕಾರಿ ಆಸ್ಪತ್ರೆಯಾಗಿತ್ತು. 1942ರಲ್ಲಿ 33, 1950 ರಲ್ಲಿ 53 ಹಾಗೂ 2000ರಲ್ಲಿ 100 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಬಳಿಕ ರೋಗಿಗಳ ಸಂಖ್ಯೆ ವಿಪರೀತ ಏರಿಕೆ ಯಾದರೂ ಅಭಿವೃದ್ಧಿ ಆಗಿರಲಿಲ್ಲ.
ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕು ಎಂಬ ಬಗ್ಗೆ ಈಗ ಹೋರಾಟ ಆರಂಭವಾಗಿ 180 ಕೋ.ರೂ. ಪ್ರಸ್ತಾವನೆಯೀಗ 250 ಕೋ.ರೂ.ಗೆ ಹೆಚ್ಚಳವಾಗಿದೆ. ಜತೆಗೆ ಸರಕಾರಿ ಆಸ್ಪತ್ರೆಗೆ ಹಳೆ ಸಬ್ ರಿಜಿಸ್ಟ್ರಾರ್ ಕಚೇರಿ ಜಾಗವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನು ಮತ್ತಷ್ಟು ಅತ್ಯಾಧುನಿಕಗೊಳಿಸಬೇಕೆಂಬ ಆಗ್ರಹ 15 ವರ್ಷಗಳಿಂದ ಕೇಳಿ ಬರುತ್ತಿದೆ.
ಬಂಟ್ವಾಳ, ಬೆಳ್ತಂಗಡಿ, ಕಡಬ, ವಿಟ್ಲ ಗಡಿ ಭಾಗಕ್ಕೆ ಹೊಂದಿಕೊಂಡ ಪುತ್ತೂರು, ನಾಲ್ಕು ತಾಲೂಕುಗಳಿಗೆ ಕೇಂದ್ರ ಸ್ಥಾನವಾಗಲು ಅರ್ಹ. ಮಡಿಕೇರಿ ಗಡಿಭಾಗದಿಂದ ಬಂಟ್ವಾಳ ಗಡಿ ತನಕ ಸುಸಜ್ಜಿತ ಸರಕಾರಿ ಆಸ್ಪತ್ರೆ ಇಲ್ಲ. ಪುತ್ತೂರು ತಾಲೂಕು ಆಸ್ಪತ್ರೆಯನ್ನು 300 ಬೆಡ್ ಸಾಮರ್ಥಯಕ್ಕೆ ಏರಿಸಿದರೆ ಈ ಭಾಗದ ಜನರು ವೆನ್ಲಾಕ್ ಆಸ್ಪತ್ರೆಯನ್ನೇ ಅವಲಂಬಿಸುವುದು ಕಡಿಮೆಯಾಗಲಿದೆ.
ಮೆಡಿಕಲ್ ಕಾಲೇಜಿಗೆ ಅನುಮತಿ ಬಳಿಕ ಏನೇನೂ ಆಗಬೇಕು..?
1. ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1950ರಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯನ್ನು ನೋಂದಾಯಿಸಬೇಕಿದೆ.
2. ತಾಲೂಕು ಆಸ್ಪತ್ರೆಯನ್ನು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಿ ಅದನ್ನು ಸ್ವಾಯತ್ತ ಸಂಸ್ಥೆಗೆ ವರ್ಗಾಯಿಸಬೇಕು.
3. 30 ಎಕ್ರೆ ಜಮೀನು ಕಾದಿರಿಸಿ ಪಹಣಿಯಲ್ಲಿ ದಾಖಲಿಸಬೇಕು (ಪುತ್ತೂರಿನಲ್ಲಿ ಆ ಕೆಲಸ ಆಗಿದೆ)
4.ಕಾಲೇಜಿನ ಮೂಲ ಸೌಕರ್ಯಕ್ಕೆ ಕನಿಷ್ಠ 120 ಕೋ.ರೂ. ಒದಗಿಸಿ ಲೋಕೋಪಯೋಗಿ ಇಲಾಖೆ ಮೂಲಕ ಅಗತ್ಯ ಕಾಮಗಾರಿ ನಡೆಸಬೇಕು.
5. ಕಾಲೇಜು ಆರಂಭವಾಗುವುದಾದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ಕನ್ಸೆಂಟ್ ಆಪ್ ಎಫಿಲಿಯೇಶನ್ ಪಡೆದು, ಬಳಿಕ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ, ಎಂಸಿಐಎ ಸಲ್ಲಿಸಬೇಕು. ಅನಂತರ ಎಂಸಿಐ ತಂಡ ತಪಾಸಣೆಗಾಗಿ ಭೇಟಿ ನೀಡಲಿದೆ.
6. ಕಾಲೇಜಿನ ಪರಿಪೂರ್ಣ ರಚನೆಯನ್ನು ಎಂಸಿಯ ಮಾರ್ಗಸೂಚಿ ಅನ್ವಯ ಐದು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಮಾಡಬೇಕಿದೆ.