ಮಂಗಳೂರು : ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಸಿಇಓ ಶ್ರೀಕೃಷ್ಣನ್ ಹರಿಹರ ಶರ್ಮಾ ರಾಜೀನಾಮೆ ನೀಡಿದ್ದಾರೆ. ಅಧಿಕಾರವಹಿಸಿಕೊಂಡ ಎರಡು ವರ್ಷಗಳಲ್ಲಿ ರಾಜೀನಾಮೆ ನೀಡಿದ್ದು, ಸದ್ಯ ಸುದ್ದಿಯಲ್ಲಿದೆ. ಕರ್ಣಾಟಕ ಬ್ಯಾಂಕಿನ ಎಂಡಿ ಮತ್ತು ಸಿಇಒ ಹುದ್ದೆಗೆ ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು ರಾಜೀನಾಮೆ ನೀಡಿದ್ದಾರೆ. ಶರ್ಮಾ ಅವರು ಶುಕ್ರವಾರವೇ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮನಿಕಂಟ್ರೋಲ್ ವರದಿ ಮಾಡಿದೆ.
ಕರ್ಣಾಟಕ ಬ್ಯಾಂಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ಯಾಂಕ್ ನಿಂದ ಹೊರಗಿನವರಿಗೆ ಎಂಡಿ ಮತ್ತು ಸಿಇಓ ಪಟ್ಟ ಕೊಡಲಾಗಿತ್ತು. ಆದರೆ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಇಓ ನಡುವೆ ಒಂದು ವಿಚಾರಕ್ಕೆ ತಿಕ್ಕಾಟ ಎರ್ಪಟ್ಟಿತ್ತು. ಇದು ಇದೀಗ ರಾಜೀನಾಮೆ ಹಂತಕ್ಕೆ ಬಂದು ತಲುಪಿದೆ.ಬ್ಯಾಂಕಿನ ಅಧಿಕೃತ ಲೆಕ್ಕಪರಿಶೋಧಕರಾದ ರವಿ ರಾಜನ್ ಆಂಡ್ ಕೊ ಎಲ್‌ಎಲ್‌ಪಿ ಮತ್ತು ಆರ್‌ಜಿಎನ್ ಪ್ರೈಸ್ ಆಂಡ್ ಕೊ ಮೇ ತಿಂಗಳಲ್ಲಿ ತಮ್ಮ ಟಿಪ್ಪಣಿಯಲ್ಲಿ, ಬ್ಯಾಂಕ್ ಸಲಹೆಗಾರರನ್ನು ತೊಡಗಿಸಿಕೊಳ್ಳುವ ಮತ್ತು ಬ್ಯಾಂಕಿನ ಪೂರ್ಣಾವಧಿ ನಿರ್ದೇಶಕರ ಅಧಿಕಾರವನ್ನು ಮೀರಿ ಇತರ ಉದ್ದೇಶಗಳಿಗಾಗಿ ಮಾಡಿದ 1.53 ಕೋಟಿ ರೂ. ವೆಚ್ಚದ ಬಗ್ಗೆ ಉಲ್ಲೇಖಿಸಿದ್ದರು.
ಆದರೆ, ಇದಕ್ಕೆ ಆಡಳಿತ ಮಂಡಳಿಯ ಅನುಮೋದನೆ ಪಡೆದುಕೊಂಡಿರಲಿಲ್ಲ. ಈ ಸಂಬಂಧ ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಆಡಳಿತ ನಡುವೆ ವ್ಯತ್ಯಾಸಗಳು ಹುಟ್ಟಿಕೊಂಡಿದ್ದವು. ‘ಈ ಮೊತ್ತವನ್ನು ಸಂಬಂಧಪಟ್ಟ ನಿರ್ದೇಶಕರಿಂದ ವಸೂಲಿ ಮಾಡಬಹುದು’ ಎಂದು ಲೆಕ್ಕಪರಿಶೋಧಕರು ಹೇಳಿದ್ದರು. ಆ ವೆಚ್ಚದ ಸಂಬಂಧ ಹುಟ್ಟಿಕೊಂಡಿದ್ದ ವಿವಾದ ಇದೀಗ ಇಬ್ಬರ ಹುದ್ದೆಯಿಂದ ಕೆಳಗಿಳಿಯುವ ಹಂತಕ್ಕೆ ಬಂದಿದೆ.
ಶ್ರೀಕೃಷ್ಣನ್ ಹರಿಹರ ಶರ್ಮಾ ಬಳಿಕ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಹಿರಿಯ ಅಧಿಕಾರಿ ಶೇಖರ್ ರಾವ್ ಕೂಡ ಜುಲೈ 30 ರೊಳಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರೀಕ್ಷೆ ಇದೆ.
ಬ್ಯಾಂಕ್ ನ ಇತಿಹಾಸದಲ್ಲಿ ಮೊದಲ ಬಾರಿಗೆ ಉನ್ನತ ಹುದ್ದೆಗೆ ಹೊರಗಿನವರಿಗೆ ಮಣಿ ಹಾಕಿದ್ದ ಕರ್ಣಾಟಕ ಬ್ಯಾಂಕ್ ಆಡಳಿತ ಮಂಡಳಿಗೆ ಇದು ದೊಡ್ಡ ಹೊಡೆತ ಎಂದು ಹೇಳಲಾಗಿದೆ.























