‘ಮನೆಮನೆಗೆ ಪೊಲೀಸ್’ ಎಂಬ ವಿನೂತನ ಕಾರ್ಯಕ್ರಮಕ್ಕೆ ಕರ್ನಾಟಕ ಪೊಲೀಸ್ ಇಲಾಖೆ ಕಳೆದ ವಾರ ಚಾಲನೆ ಕೊಟ್ಟಿದೆ. ಪೊಲೀಸರು ಮತ್ತು ನಾಗರಿಕ ಜಗತ್ತಿನ ನಡುವಿನ ಅಂತರವನ್ನು ಕಡಿಮೆ ಮಾಡಿ, ಅವರ ಮಧ್ಯೆ ಬಾಂಧವ್ಯವನ್ನು ಬೆಸೆದು, ನಾಗರಿಕರು ಕಾನೂನನ್ನು ಕೈಗೆತ್ತಿಕೊಳ್ಳದೇ ಪೊಲೀಸರ ಜೊತೆ ಸಹಕರಿಸುವಂತೆ ಮಾಡುವುದಕ್ಕಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನಿಜವಾಗಿಯೂ ಶ್ಲಾಘನೀಯ. ಈ ಕಾರ್ಯಕ್ರಮ, ಇತ್ತೀಚೆಗೆ ಅಧಿಕಾರವಹಿಸಿಕೊಂಡಿರುವ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರ ಕನಸಿನ ಕೂಸು. ಮೊದಲ ಹಂತದಲ್ಲಿ ನಗರ ಪ್ರದೇಶಗಳಿಗೆ ಸೀಮಿತವಾಗಿರುವ ಈ ಕಾರ್ಯಕ್ರಮ ಗ್ರಾಮೀಣ ಭಾಗಕ್ಕೂ ಪಸರಿಸಲಿ. ಈ ಕಾರ್ಯಕ್ರಮದ ಜೊತೆಗೆ ಇನ್ನೂ ಹಲವಾರು ನಾಗರಿಕ-ಕೇಂದ್ರಿತ ಕಾರ್ಯಕ್ರಮಗಳನ್ನು ಡಾ ಸಲೀಂ ಅವರು ತರಲಿ.
ಇಂತಹ ಖುಷಿಯ ಸಂದರ್ಭದಲ್ಲಿ ಒಂದು ಗಂಭೀರ ವಿಚಾರವನ್ನು ಹೇಳಲೇಬೇಕು. ಹಗಲಿರುಳು ಬೆವರು ಸುರಿಸಿ ರಾಜ್ಯದ ಜನರನ್ನು ಕಾಯುತ್ತಾ, ಅಪರಾಧ ಮಾಡಿದವರ ಜಾಡು ಹಿಡಿದು ಕೇಸುಗಳನ್ನು ಭೇದಿಸುತ್ತಿರುವ ನೂರಾರು ಪ್ರಾಮಾಣಿಕ ಅಧಿಕಾರಿಗಳ ಮಧ್ಯೆಯಿರುವ ಬೆರಳೆಣಿಕೆಯ ತೋಳಗಳ ಲೋಪಗಳಿಂದ ಪ್ರಾಮಾಣಿಕ ಅಧಿಕಾರಿಗಳು ತಲೆತಗ್ಗಿಸುವಂತಾಗಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಕರ್ನಾಟಕ ರಾಜ್ಯಕ್ಕೆ ಬಹು ದೊಡ್ಡ ಕಂಟಕ ಕಾದಿದೆ.
ಕಳೆದ ಆರು ತಿಂಗಳಲ್ಲಿ ನಡೆದ ಅನೇಕ ಅಪರಾಧ ಕೃತ್ಯಗಳ ಪೈಕಿ ನಾಲ್ಕು ಕೃತ್ಯಗಳು ರಾಜ್ಯದ ಜನರ ನಿದ್ದೆ ಕೆಡಿಸಿವೆ. ಆದರೆ, ಸರಕಾರ ಮಾತ್ರ ಇವೆಲ್ಲ ಬಿಡಿ ಅಪರಾಧ ಕೃತ್ಯಗಳು. ಒಂದಕ್ಕೊಂದು ಸಂಬಂಧ ಇಲ್ಲ. ಹಾಗಾಗಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದುಕೊಂಡಂತಿದೆ.
ಈ ಸರಣಿಯಲ್ಲಿ ಮೊದಲು ಬಂದಿದ್ದು, ಬಂಗಾರ ಕಳ್ಳಸಾಗಣೆ ಕೇಸ್. ಇದು ಜನರಿಗೆ ಶಾಕ್ ನೀಡಿತು. ಈ ಕುರಿತು ರಾಜ್ಯದ ಜನ ಊರೂರಲ್ಲಿ ಮಾತಾಡಿಕೊಂಡರು. ಶಿಷ್ಟಾಚಾರದ ಗಡಿ ದಾಟಿ ಪೊಲೀಸರು ನೇಮಕ ಮಾಡಿದ್ದ ಕಾವಲು ಗಡಿಯನ್ನೇ ಉಪಯೋಗಿಸಿಕೊಂಡು ಬಂಗಾರ ಕಳ್ಳಸಾಗಣೆ ಮಾಡಿದ ಆರೋಪ ನಟಿ ರನ್ಯಾ ರಾವ್ ಅವರ ಮೇಲೆ ಬಂದಾಗ ಕರ್ನಾಟಕ ಪೊಲೀಸರಿಗೆ ಮುಖಭಂಗವಾಯಿತು. ಯಾಕೆಂದರೆ, ರನ್ಯಾರಾವ್ ಹೇಳಿ ಕೇಳಿ ಓರ್ವ ಡಿಜಿಪಿ ಹಂತದ ಅಧಿಕಾರಿಯ ಮಗಳು. ಇದನ್ನು ಭೇದಿಸಿದವರು ಕೇಂದ್ರ ಕಂದಾಯ ಗುಪ್ತಚರ ಇಲಾಖೆ.
ಸುಮಾರು ಮೂರು ವಾರಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ ಕೇಂದ್ರೀಯ ತನಿಖಾ ದಳ, ಓರ್ವ ವೈದ್ಯ ಹಾಗೂ ಮತ್ತೊಬ್ಬ ಎಎಸ್ಐನನ್ನು ಬಂಧಿಸಿತು. ಖಚಿತ ಮಾಹಿತಿಯೊಂದಿಗೆ ನಡೆಸಿದ ದಾಳಿಯ ನಂತರ, ಎನ್ಐಎ ತನಿಖೆಯಿಂದ ಗಂಭೀರ ವಿಚಾರಗಳು ಹೊರಬಂದಿವೆ. ಜೈಲಿನ ಒಳಗಿರುವ ಆರೋಪಿಯೊಬ್ಬನಿಗೆ ಬಂದೀಖಾನೆಯಿಂದ ತಪ್ಪಿಸಿಕೊಳ್ಳಲು ಯೋಜನೆಯೊಂದನ್ನು ರೂಪಿಸಲು ಎಎಸ್ಐ ಚಾಂದ್ ಪಾಷಾ ಸಹಕರಿಸುತ್ತಿದ್ದ. ಜೈಲಿನಿಂದ ತಪ್ಪಿಸಿಕೊಂಡು ಹೊರ ಬಂದ ನಂತರ ಕೇರಳಕ್ಕೆ ಹೋಗಿ, ಅಲ್ಲಿಂದ ಮುಂದೆ ಮಧ್ಯ ಪ್ರಾಚ್ಯಕ್ಕೆ ಹೋಗಲು ಅನುಕೂಲವಾಗುವಂತೆ ಪೊಲೀಸ್ ಸಮವಸ್ತ್ರವನ್ನು ಹೊಲಿಸಿದ್ದ ಎನ್ನುವ ಮಾಹಿತಿ ನಿಜವೇ ಆಗಿದ್ದರೆ, ಇದು ಬಹಳ ಗಂಭೀರ ವಿಚಾರ.
ಇನ್ನೊಂದು ಘಟನೆಯಲ್ಲಿ, ಶನಿವಾರ ರಾತ್ರಿ ಮುಂಬೈ ಮತ್ತು ಅಹಮದಾಬಾದ್ ಪೊಲೀಸರು ಮೈಸೂರಿಗೆ ಬಂದು ನಗರದ ಹೃದಯ ಭಾಗದಲ್ಲಿರುವ ಗ್ಯಾರೇಜೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿತು. ಈ ದಾಳಿ ಮಾಡುವಾಗ ಸ್ಥಳೀಯ ಪೊಲೀಸರ ಸಹಕಾರ ಪಡೆದಿತ್ತು ಎನ್ನುವುದು ಸಮಾಧಾನಕರ ವಿಷಯ. ಮೈಸೂರಿನ ಘಟನೆಗೆ ಸಂಬಂಧಿಸಿದಂತೆ ಅಲ್ಲಿಯ ಕಮಿಷನರ್ ಕ್ರಮ ತೆಗೆದುಕೊಳ್ಳಲು ಮುಂದಾದಾಗ ಅವರ ಕೈಕಟ್ಟಿದ್ದು ವಿಷಾದನೀಯ. ಯಾವ ಜಾಗದಲ್ಲಿ ಈ ಡ್ರಗ್ಸ್ ಫ್ಯಾಕ್ಟರಿ ನಡೆಯುತ್ತಿತ್ತೋ ಆ ಜಾಗ ಇರುವ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ರನ್ನು, ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ ಕಮಿಷನರ್ ಹೊರಡಿಸಿದ ಆದೇಶವನ್ನು 24 ಗಂಟೆ ಒಳಗೆ ಕಸದ ಬುಟ್ಟಿಗೆ ಎಸೆಯುವಂತೆ ಮಾಡಲಾಯಿತು.
ನಾಲ್ಕನೇಯದ್ದು; ಇನ್ಸ್ಟಾಗ್ರಾಮ್ನಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದಳು ಎನ್ನುವ ಆರೋಪದ ಮೇಲೆ ಬೆಂಗಳೂರಿನ ಮಹಿಳೆಯೋರ್ವಳನ್ನು ಅಹಮದಾಬಾದ್ ಭಯೋತ್ಪಾದಕ ನಿಗ್ರಹ ದಳ ಬಂಧಿಸಿರುವ ವಿಚಾರ.
ಈ ನಾಲ್ಕೂ ಘಟನೆಯ ಹಿಂದೆ ಒಂದು ಸಾಮ್ಯತೆ ಇದೆ. ಈ ಘಟನೆಗಳ ಕುರಿತು ಸ್ಥಳೀಯ ಪೊಲೀಸರಿಗೆ ಮತ್ತು ರಾಜ್ಯದ ಗುಪ್ತಚರ ಇಲಾಖೆಗೆ ಮಾಹಿತಿಯಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಥವಾ, ಅಪರಾಧಕ್ಕಿಳಿದಿರುವ ಸಮಾಜ ವಿರೋಧಿಗಳು, ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಇಲಾಖೆಯ ಕೆಲ ಅಧಿಕಾರಿಗಳನ್ನು ತಮ್ಮ ಕಿಸೆಗಿಳಿಸಿಕೊಂಡಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಒಂದೆಡೆ, ಮನೆ ಮನೆಗೆ ಪೊಲೀಸ್ ಎನ್ನುವ ಅತ್ಯಂತ ವಿನೂತನ ಕಾರ್ಯಕ್ರಮವನ್ನು ರೂಪಿಸುವ ಪೊಲೀಸ್ ಇಲಾಖೆ. ಮತ್ತೊಂದೆಡೆ, ಕರ್ತವ್ಯ ಚ್ಯುತಿಯ ಆರೋಪದ ಮೇಲೆ ಒಬ್ಬ ಇನ್ಸ್ಪೆಕ್ಟರ್ರನ್ನು ಮೈಸೂರು ಪೊಲೀಸ್ ಕಮಿಷನರ್ ಅಮಾನತು ಮಾಡಿದರೆ, ರಾಜಕೀಯ ಒತ್ತಡದ ಕಾರಣಕ್ಕಾಗಿ ಆ ಆದೇಶವನ್ನು 24 ಗಂಟೆಯೊಳಗೆ ವಾಪಸ್ ತೆಗೆದುಕೊಳ್ಳುವಂತಾಗಿದ್ದು ವಿಪರ್ಯಾಸ.
ಈ ನಾಲ್ಕೂ ಕೇಸಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ಸಾಮ್ಯತೆಗಳಿವೆ. ಸಮಾಜ ವಿರೋಧಿ ಮತ್ತು ಅಪರಾಧ ಮಾಡುವ ಸಾರ್ವಜನಿಕರು ತಮ್ಮ ಇನ್ನಿಂಗ್ಸ್ ಆರಂಭಿಸುವುದು ಭ್ರಷ್ಟಾಚಾರದ ಮೂಲಕ. ಯಾರಿಗೋ ಬಿಪಿಎಲ್ ಕಾರ್ಡ್ ಕೊಡಿಸುವುದು-ಹೀಗೆ ಶುರುವಾಗುವ ಭ್ರಷ್ಟ ಕೆಲಸಗಳಿಂದ ಸಿಗುವ ಹಣ ತುಂಬಾ ಕಡಿಮೆಯಾಯ್ತು ಎನ್ನಿಸಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗುತ್ತಾನೆ ಮತ್ತು ಗಂಭೀರ ಅಪರಾಧ ಕೃತ್ಯವೆಸಗುವ ತಂಡದ ಜೊತೆ ಕೈ ಜೋಡಿಸಿ ಒಂದೋ ಎರಡೋ ಅಪರಾಧ ಕೃತ್ಯವೆಸಗಿ ಜಾಕ್ಪಾಟ್ ಹೊಡೆದು ಕೋಟ್ಯಂತರ ರೂಪಾಯಿ ಗಳಿಸೋಣ ಎಂಬ ಲೆಕ್ಕಾಚಾರಕ್ಕಿಳಿಯುತ್ತಾನೆ. ಇನ್ನೊಂದು ವರ್ಗವಿದೆ. ಈ ವರ್ಗದ ಜನ ತಾವು ಮಾಡುವ ಅಪರಾಧಗಳನ್ನು ಮುಚ್ಚಿಡಲು ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ಪೊಲೀಸರ ಕೈ ಬೆಚ್ಚಗೆ ಮಾಡುತ್ತಲೇ ಇರುತ್ತಾರೆ. ಪರಪ್ಪನ ಅಗ್ರಹಾರ ಪ್ರಕರಣ ಮತ್ತು ಮೈಸೂರಿನ ಡ್ರಗ್ಸ್ ಫ್ಯಾಕ್ಟರಿ- ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಭ್ರಷ್ಟ ಅಧಿಕಾರಿಗಳು ಮತ್ತವರ ಭ್ರಷ್ಟ ವ್ಯವಸ್ಥೆ ಕೆಲಸ ಮಾಡಿರುವುದು ನಿಚ್ಚಳವಾಗಿ ಕಾಣುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಮುಂದಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಈ ಕುರಿತು ಗಮನ ಹರಿಸಬೇಕಾಗಿದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಗಂಭೀರ ಅಪರಾಧ ಕೃತ್ಯಗಳ ಬಗ್ಗೆ ಹೊರ ರಾಜ್ಯದ ಪೊಲೀಸರಿಗೆ ಮತ್ತು ಕೇಂದ್ರ ಸರಕಾರಕ್ಕೆ ಮಾಹಿತಿ ಸಿಗುತ್ತಿದೆ. ಹಾಗಿದ್ದರೆ, ನಮ್ಮ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ.
ಪ್ರಾಮಾಣಿಕ ಪೊಲೀಸರ ನಡುವೆ ಇದ್ದು, ಭ್ರಷ್ಟ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ಯಶಸ್ವಿಯಾಗಿ ನಡೆಸುವ ಭ್ರಷ್ಟರ ಕೂಟಕ್ಕೆ ಕೊನೆ ಹಾಡದಿದ್ದರೆ ಮುಂದೊಂದು ದಿನ ಆಡಳಿತ ಪಕ್ಷಕ್ಕೆ ಕಂಟಕ ಬರಬಹುದು. ಅದಕ್ಕಿಂತ ಹೆಚ್ಚಾಗಿ, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟು, ಭವಿಷ್ಯದಲ್ಲಿ ರಾಜ್ಯದ ಜನ ಹಿಡಿಶಾಪ ಹಾಕುವ ದಿನ ಬರಬಹುದು.