ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೇಬಿಸ್ ರೋಗದ ಹಾವಳಿ ನಿಂತಿಲ್ಲ. ಕಳೆದ 6 ತಿಂಗಳಲ್ಲಿ ಬೆಂಗಳೂರಿನಲ್ಲಿ 17 ಜನರು ರೇಬಿಸ್ ರೋಗದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 23 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 17 ರೇಬಿಸ್ ಪ್ರಕರಣಗಳು ಧೃಢಪಟ್ಟಿದ್ದರೇ, ಈ ವರ್ಷ 6 ತಿಂಗಳಲ್ಲೇ 17 ಜನರು ರೇಬಿಸ್ಗೆ ಬಲಿಯಾಗಿದ್ದು ಆತಂಕ ಹೆಚ್ಚಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ರೇಬಿಸ್ ಪ್ರಕರಣಗಳಲ್ಲಿ ಏರಿಕೆಯಾಗಿದೆ.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 60 ಕ್ಕೂ ಹೆಚ್ಚು ಜನರು ರೇಬಿಸ್ನಿಂದ ಸಾವಿಗೀಡಾಗಿದ್ದಾರೆ. ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 2,60,514 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಈ ಒಂದೇ ವಾರದಲ್ಲಿ 10,242 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಓರ್ವರು ಮೃತಪಟ್ಟಿದ್ದಾರೆ.
ತೀವ್ರ ನೋವು, ಸುಸ್ತಾಗುವುದು ತಲೆನೋವು, ತೀವ್ರ ಜ್ವರ, ಸ್ನಾಯುಗಳ ಬಿಗಿತ ಮತ್ತು ನೋವು, ಪಾರ್ಶ್ವವಾಯು, ಲಾಲಾರಸ ಅಥವಾ ಕಣ್ಣೀರು ಹೆಚ್ಚು ಉತ್ಪತ್ತಿಯಾಗಲು ಪ್ರಾರಂಭಿಸುವುದು. ದೊಡ್ಡ ಶಬ್ದಗಳಿಂದ ಕಿರಿಕಿರಿ ಹಾಗೂ ಮಾತನಾಡಲು ತೊಂದರೆಯಾಗುವುದು ಇಂತಹ ಲಕ್ಷಣ ಕಂಡು ಬಂದರೇ ನಿರ್ಲಕ್ಷ್ಯ ಮಾಡದೆ ಕೂಡಲೆ ಚಿಕಿತ್ಸೆ ಪಡೆಯಿರಿ ಎಂದು ವೈದ್ಯರು ಸೂಚಿಸಿದ್ದರು.
ನಾಯಿ ಕಡಿತ ಕೇಸ್ಗಳಲ್ಲಿ ತುಮಕೂರೇ ರಾಜ್ಯದಲ್ಲಿ ಮೊದಲಿಗಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 10 ಸಾವಿರ ಜನರಿಗೆ ನಾಯಿಗಳು ಕಡಿದಿವೆ. ಇದರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇನ್ನು ಶಿರಾ ಒಂದರಲ್ಲೇ ನಾಯಿ ಕಡಿತಕ್ಕೆ 6 ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಹಿಡಿದ ನಾಯಿಗಳನ್ನು ತುಮಕೂರಿಗೆ ತಂದು ಬಿಡ್ತಿದ್ದಾರಂತೆ.
ಬೀದಿನಾಯಿಗಳ ಸಂತಾನೋತ್ಪತ್ತಿಯಲ್ಲಿ ಹೆಚ್ಚಳವಾಗಿದೆ. ಜೊತೆಗೆ ಬೀದಿ ನಾಯಿಗಳಿಗೆ ಅನ್ನ ಹಾಕಿ ನಾಯಿ ಮರಿಗಳನ್ನ ಬಿಟ್ಟು ಹೋಗುದರಿಂದ ದಾರಿಯಲ್ಲಿ ನಡ್ಕೊಂಡು ಹೋಗುವವರಿಗೆ ಬೈಕ್ ಸಾವಾರರಿಗೆ ಕಷ್ಟ ವಾಗುತಿದೆ. ನಾನ್ ವೆಜ್ ಹೋಟೆಲ್ನವರು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ. ರಕ್ತದ ರುಚಿ ಕಂಡು ಮಕ್ಕಳು, ವೃದ್ಧರ ಮೇಲೆ ಶ್ವಾನಗಳು ದಾಳಿ ಮಾಡುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದರೆ.