‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಚಿತ್ರರಂಗದ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕಾಲಿಟ್ಟಿದೆ. ಈ ಚಿತ್ರವನ್ನು ಒಳ್ಳೆಯ ರೀತಿಯಲ್ಲಿ ಡಬ್ ಮಾಡಿ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ. ದುಲ್ಕರ್ ಸಲ್ಮಾನ್ ಅವರು ಚಿತ್ರವನ್ನು ಹಂಚಿಕೆ ಮಾಡಿದ್ದಾರೆ. ಈ ಸಿನಿಮಾಗೆ ಕೇರಳದಲ್ಲಿ ಒಳ್ಳೆಯ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕ್ ಮೈ ಶೋನಲ್ಲಿ ಮಲಯಾಳಂ ವರ್ಷನ್ಗೆ ಒಳ್ಳೆಯ ರೇಟಿಂಗ್ ಸಿಕ್ಕಿದೆ ಅನ್ನೋದು ವಿಶೇಷ.
ಕೇರಳದ ಕೊಚ್ಚಿಯಲ್ಲಿ ಶುಕ್ರವಾರ (ಆಗಸ್ಟ್ 1) ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ರಾಜ್ ಬಿ. ಶೆಟ್ಟಿ ಮೊದಲಾದವರು ಈ ವೇಳೆ ಭಾಗವಹಿಸಿದ್ದರು. ಮಲಯಾಳಂ ವರ್ಷನ್ ನೋಡಿದ ಅನೇಕರು ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಮಲಯಾಳಂ ಭಾಷೆಗೆ ಉತ್ತಮವಾಗಿ ಡಬ್ ಮಾಡಲಾಗಿದೆ ಎಂದು ಅನೇಕರು ಹೇಳಿದ್ದಾರೆ.
ಕೊಚ್ಚಿಯಲ್ಲಿ ಆಗಸ್ಟ್ 1ರ ರಾತ್ರಿ ಶೋಗಳ ಪೈಕಿ ಕೆಲವು ಹೌಸ್ಫುಲ್ ಆಗಿತ್ತು. ಈಗಾಗಲೇ ಸಿನಿಮಾಗೆ ಬುಕ್ ಮೈ ಶೋನಲ್ಲಿ (ಮಲಯಾಳಂ ವರ್ಷನ್) 9.1 ರೇಟಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಅನೇಕರು ಹೊಗಳಿದ್ದಾರೆ. ಮಲಯಾಳಂನಲ್ಲಿ ಈ ರೀತಿಯ ಹಳ್ಳಿ ಸೊಗಡಿನ ಚಿತ್ರಗಳನ್ನೇ ಹೆಚ್ಚು ಮಾಡಲಾಗುತ್ತದೆ. ಆ ಕಾರಣಕ್ಕೆ ಅವರಿಗೆ ಸಿನಿಮಾ ಮತ್ತಷ್ಟು ಇಷ್ಟ ಆಗಿದೆ.
‘ಸು ಫ್ರಮ್ ಸೋ’ ಸಿನಿಮಾವನ್ನು ಮಲಯಾಳಂ ಬಳಿಕ ತೆಲುಗಿಗೆ ಹಾಗೂ ಹಿಂದಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತಮಿಳು ಭಾಷೆಗೆ ರಿಮೇಕ್ ಮಾಡಲು ಬೇಡಿಕೆ ಬಂದಿದೆ. ಸಿನಿಮಾ ಕರ್ನಾಟಕದಲ್ಲಿ ಎರಡನೇ ವಾರವೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಟಾಕ್ ಮಲಯಾಳಂ ಚಿತ್ರರಂಗವನ್ನೂ ತಲುಪಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಅನೇಕರು ಸಿನಿಮಾ ಮಂದಿರಕ್ಕೆ ತೆರಳಿ ವೀಕ್ಷಿಸುತ್ತಿದ್ದಾರೆ. ಮಲಯಾಳಂ ಭಾಷೆಯಲ್ಲಿ ಸಿನಿಮಾ ಹಿಟ್ ಆದರೆ, ಉಳಿದ ಭಾಷೆಗಳಿಗೆ ರಿಲೀಸ್ ಆಗಲು ಮತ್ತಷ್ಟು ಬೂಸ್ಟ್ ಸಿಕ್ಕಂತೆ ಆಗಲಿದೆ.