ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು 16 ಸ್ಥಾನ ಗೆಲ್ಲಬೇಕಿತ್ತು, ಆದರೆ ಬಿಜೆಪಿ ಮತಗಳ್ಳತನ ಮಾಡಿದ್ದರಿಂದ ನಾವು ಕೇವಲ 9 ಕ್ಷೇತ್ರಗಳಲ್ಲಿ ಗೆದ್ದೆವು ಎಂದು ಸಿಎಂ ಸಿದ್ದರಾಯ್ಯಮ ವಾಗ್ದಾಳಿ ಮಾಡಿದ್ದಾರೆ. ನಗರದ ಫ್ರೀಡಂಪಾರ್ಕ್ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವತ್ತೂ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು.
ಈ ಪ್ರತಿಭಟನಾ ರ‍್ಯಾಲಿ ಕರ್ನಾಟಕದಿಂದ ಪ್ರಾರಂಭವಾಗಿದೆ. ರಾಹುಲ್ ಗಾಂಧಿ ಸುದ್ದಿಗೋಷ್ಠಿ ಮಾಡಿ ಅನೇಕ ವಿಚಾರ ಹೇಳಿದ್ದಾರೆ. ರಾಹುಲ್ ಗಾಂಧಿ ರಾಜಕಾರಣಿಯಾಗಿ ಆರೋಪ ಮಾಡಿಲ್ಲ, ಅಧ್ಯಯನ ಮಾಡಿ ಸಾಕ್ಷ್ಯಾಧಾರ ಇಟ್ಟುಕೊಂಡು ಮಾತನಾಡಿದ್ದಾರೆ ಎಂದು ಅವರು ಹೇಳಿದರು.
ಸಂವಿಧಾನ ಜಾರಿಯಾದ ಮೇಲೆ ಒಬ್ಬ ವ್ಯಕ್ತಿಗೆ ಒಂದು ವೋಟ್. ಚುನಾವಣಾ ಆಯೋಗ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಕೊಟ್ಟಿದ್ದು, ಮತದಾನ ನಮ್ಮ ಮೂಲಭೂತ ಹಕ್ಕು, ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಮತಗಳ್ಳತನವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಬಹುಮತ ಗಳಿಸಿರಲಿಲ್ಲ. ಅಕ್ರಮದ ಮೂಲದ ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಮೋದಿಗೆ ಪ್ರಧಾನಿ ಸ್ಥಾನದಲ್ಲಿ ಇರಲು ನೈತಿಕತೆ ಇಲ್ಲ, ಕೂಡಲೇ ರಾಜೀನಾಮೆ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ. ಹಾಗಾಗಿ ರಾಹುಲ್ ಗಾಂಧಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮೋದಿ ವೋಟ್ ಕಳ್ಳತನ ಮಾಡಿ ದೇಶದ ಪ್ರಧಾನಮಂತ್ರಿ ಆಗಿದ್ದಾರೆ. ರಾಹುಲ್ ಗಾಂಧಿ ಮಹದೇವಪುರ ಕ್ಷೇತ್ರದ 6.60 ಲಕ್ಷ ಮತದಾರರ ಮಾಹಿತಿ ಕಲೆಹಾಕಿದ್ದಾರೆ. ಪ್ರಜಾಪ್ರಭುತ್ವ, ಮತದಾನದ ಅಧಿಕಾರ ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಮೋದಿ, ಅಮಿತ್ ಶಾ ಪ್ಲ್ಯಾನ್ ಮಾಡಿ ಮತಕಳ್ಳತನ ಮಾಡಿದ್ದಾರೆ. ಕೇಂದ್ರದಲ್ಲಿ ಇರುವುದು ಕಳ್ಳತನದ ಸರ್ಕಾರ ಎಂದು ವಾಗ್ದಾಳಿ ಮಾಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋತೆ. ಟಾರ್ಗೆಟ್ ಮಾಡಿ ನನ್ನನ್ನು 2019ರ ಚುನಾವಣೆಯಲ್ಲಿ ಸೋಲಿಸಿದರು. 5 ಮತ ಕ್ಷೇತ್ರಗಳಲ್ಲಿ ಬೋಗಸ್ ವೋಟ್ ಹಾಕಿ ನನ್ನನ್ನು ಸೋಲಿಸಿದರು. ಬೋಗಸ್ ವೋಟ್ ಹಾಕಿ ನನ್ನನ್ನು ಸೋಲಿಸಿ ಟಾರ್ಗೆಟ್ ಮಾಡಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ತಪ್ಪುಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದೇವೆ. ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಎಲ್ಲೆಡೆ ಬೋಗಸ್ ವೋಟ್ ಮಾಡಲಾಗಿದೆ ಎಂದು ಆರೋಪಿಸಿದರು.
























