ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ಬೋಳಿಯಾರು ಎಂಬಲ್ಲಿ ಸ್ಪಾಟ್ 15 ಎಂದು ಗುರುತಿಸಲಾದ ಹೊಸ ಸ್ಥಳಕ್ಕೆ ಸಾಕ್ಷಿ-ದೂರುದಾರರನ್ನು ಕರೆದೊಯ್ದಿದೆ.
ಸಾಕ್ಷಿ-ದೂರುದಾರನೊಂದಿಗೆ ತನಿಖಾಧಿಕಾರಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಇದ್ದರು.
ಹೊಸ ಸ್ಥಳದಲ್ಲಿ ಪರಿಶೀಲನೆ ಮತ್ತು ಭೂಮಿಯನ್ನು ಅಗೆಯುವ ಕಾರ್ಯವನ್ನು ಪ್ರಾರಂಭಿಸುವುದಾಗಿ ಎಸ್‌ಐಟಿಯ ಮೂಲಗಳು ತಿಳಿಸಿದ್ದವು.
ಪ್ರಕರಣದಲ್ಲಿ ಸಾಕ್ಷಿ-ದೂರುದಾರರು ತೋರಿಸಿರುವ ಒಟ್ಟು ಸ್ಥಳಗಳ ಪೈಕಿ ಈಗಾಗಲೇ 13 ಸ್ಥಳಗಳಲ್ಲಿ ಶೋಧ ಕಾರ್ಯ ಪೂರ್ಣಗೊಂಡಿದ್ದು, ಜುಲೈ 31 ರಂದು 6ನೇ ಸ್ಥಳದಲ್ಲಿ ಮಾತ್ರ ಮಾನವ ಅವಶೇಷಗಳು ಕಂಡುಬಂದಿವೆ. ಆಗಸ್ಟ್ 5 ರಂದು, ಎಸ್‌ಐಟಿ 11 ಮತ್ತು 12ನೇ ಸ್ಥಳದಲ್ಲಿ ಅಗೆದಿತ್ತು. ಆದರೆ, ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.
ಅಲ್ಲದೆ, ಸಾಕ್ಷಿ-ದೂರುದಾರ ಗುರುತಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಉಳಿದೆಲ್ಲ ಸ್ಥಳಗಳಲ್ಲಿ ಎಸ್ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ. ಇದೀಗ 15ನೇ ಸ್ಥಳ ಎಂದು ಗುರುತಿಸಿದ ಹೊಸ ಸ್ಥಳದಲ್ಲಿಯೂ ಶೋಧಕ್ಕೆ ಮುಂದಾಗಿದೆ.
ನನಗೆ ಜೀವ ಬೆದರಿಕೆಯಿದ್ದು, ಗನ್ ಮ್ಯಾನ್ ಹಾಗೂ ಭದ್ರತೆ ಒದಗಿಸಿ ಎಂದು ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಸಾಕ್ಷಿ-ದೂರುದಾರ ವ್ಯಕ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮುಂದೆ ಮನವಿ ಮಾಡಿದ್ದಾನೆಂದು ತಿಳಿದುಬಂದಿದೆ.
ಸಾಕ್ಷಿ ಹಾಗೂ ದೂರುದಾರ ವ್ಯಕ್ತಿ ವೈಯಕ್ತಿಕ ಭದ್ರತೆ/ಗನ್ ಮ್ಯಾನ್ ಒದಗಿಸುವಂತೆ ಮನವಿ ಮಾಡಿದ್ದು, ಈಗಾಗಲೇ ಅವರಿಗೆ ಭದ್ರತೆ ಒದಗಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ರಕ್ಷಣೆ ಒದಗಿಸಿದ್ದಾರೆಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
ಏತನ್ಮಧ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಲಾಗಿದೆ ಎಂದು ತಿಳಿದಬಂದಿದೆ.
ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ಇದು ಎಫ್ಐಆರ್ ದಾಖಲಿಸಲು ಸಹಾಯ ಮಾಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈವರೆಗೂ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕಿತ್ತು. ನಂತರ ಅದನ್ನು ಎಸ್ಐಟಿಗೆ ವರ್ಗಾಯಿಸಲಾಗುತ್ತಿತ್ತು. ಇದೀಗ ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿರುವುದರಿಂದ ನೇರವಾಗಿ ಎಸ್ಐಟಿಯೇ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ.
ಪ್ರಸ್ತುತ ಎಸ್ಐಟಿಗೆ ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವ ವಹಿಸಿದ್ದು, ಡಿಐಜಿ ಎಂಎನ್ ಅನುಚೇತ್, ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಎಸ್ಐಟಿ ತಂಡದ ಭಾಗವಾಗಿದ್ದಾರೆ.