ಸದನದಲ್ಲಿ ವಿಪಕ್ಷಗಳಿಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್, ನಾವು ಪ್ರಣವ್ ಮೋಹಾಂತಿ ನೇತೃತ್ವದ ಎಸ್‌ಐಟಿ ರಚನೆ ಮಾಡಿದ್ದೆವು. ಸದ್ಯ ಅವರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಸ್ಥಳಗಳನ್ನು ಅನಾಮಿಕ ವ್ಯಕ್ತಿ ಗುರುತಿಸಿದ್ದನು. ಅವುಗಳನ್ನು ಅಗೆದು ಕಳೇಬರ ಉತ್ಖನನ ನಡೆಸಿದ್ದಾರೆ. ಆದ್ರೆ, ಅವುಗಳಲ್ಲಿ ಅನಾಮಿಕ ತೋರಿಸಿದ 2 ಸ್ಥಳಗಳಲ್ಲಿ ಮಾತ್ರ ಕೆಲವು ಕಳೇಬರದ ಕುರುಹು ಪತ್ತೆಯಾಗಿವೆ ಎಂದರು.
ಕಳೇಬರದ ಸಿಕ್ಕಿರುವ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ. ಈಗಾಗಲೇ ಕಳೇಬರ ಹಾಗೂ ಅಲ್ಲಿ ಸಿಕ್ಕಂತಹವುಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಆದ್ರೆ, ಇನ್ನೂ ಕೂಡ ಎಫ್‌ಎಸ್‌ಎಲ್ ವರದಿ ಬಂದಿಲ್ಲ ಎಂದು ಹೇಳಿದರು.
ಸತ್ಯ ಏನಿದೆಯೋ ಅದು ಆಚೆಗೆ ಬರಲಿ
ಇನ್ನು ಎಷ್ಟು ಕಡೆ ಅಗೆಯುತ್ತೀರಿ ಎಂದು ಕೇಳ್ತಾ ಇದ್ದಾರೆ. ಅವನು ಪೂರ್ತಿ ಧರ್ಮಸ್ಥಳ ತೋರಿಸಿದರೆ ಅಗೆಯೋದಿಲ್ಲ. ಮುಂದೆ ಅಗೆಯಬೇಕೋ? ಬೇಡವೋ? ಎಂದು ಎಸ್‌ಐಟಿ ತೀರ್ಮಾನ ಮಾಡುತ್ತೆ, ನಾವು ಹೇಳೊದಿಲ್ಲ. ಏನು ಮಾಡಬೇಕು ಎಂದು ಎಸ್‌ಐಟಿ ತನಿಖೆ ಮಾಡುತ್ತದೆ. DNA ಮ್ಯಾಚ್ ಮಾಡಿ ಅದು ಮನುಷ್ಯರ ಹೆಣ ಎಂದು ಮ್ಯಾಚ್ ಆಗದೇ ಹೋದರೆ ಮತ್ತು ಮ್ಯಾಚ್ ಆಗ್ತಿದೆಯಾ ಎಂದು ರಿಸಲ್ಟ್ ಬರುವ ತನಕ ಗುಂಡಿಗಳನ್ನು ಅಗೆಯದೇ ಇರಲು ಎಸ್‌ಐಟಿ ತಿರ್ಮಾನ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರ ಉದ್ದೇಶ ಏನು ಅಂತಾ ಅರ್ಥ ಆಗುತ್ತಿಲ್ಲ, ಆಗಿದೆ ಅಂತಾನೂ ಹೇಳೋಕೆ ಆಗಲ್ಲ. ಆಗಿಲ್ಲ ಅಂತಾನೂ ಹೇಳೋಕೂ ಆಗಲ್ಲ. ಅಲ್ಲಿ ಏನು ಆಗಿಲ್ಲ ಅಂದರೆ ಧರ್ಮಸ್ಥಳ ಪ್ರಾವೀತ್ಯತೆ ಇನ್ನೂ ಹೆಚ್ಚಾಗೋದಿಲ್ಲವಾ?. ಆಗಿದೆ ಅಂತಾದ್ರೆ ಸತ್ಯಾಂಶ ಹೊರಗಡೆ ಬರೋದಿಲ್ಲವಾ?. ಆ ಕುಟುಂಬಗಳಿಗೂ ನ್ಯಾಯ ಸಿಗೋದಿಲ್ಲವಾ?. ಸತ್ಯ ಹೊರಗಡೆ ಬರಲಿ, ಅಲ್ಲಿವರೆಗೂ ಕಾಯೋಣ. ಆ ಸತ್ಯ ಹೊರಗಡೆ ಬಂದರೆ ಎಲ್ಲರು ಒಪ್ಪಿಕೊಳ್ಳಲೇಬೇಕಲ್ಲವಾ?, ತನಿಖೆ ನಡೆಯುವಂತಹ ಸಂದರ್ಭದಲ್ಲಿ ನಾನು ಏನು ಹೇಳೋಕೆ ಆಗಲ್ಲ. ಮಧ್ಯಂತರ ವರದಿ ಕೂಡ ಇನ್ನೂ ಬಂದಿಲ್ಲ. ಆದಷ್ಟು ಬೇಗ ತನಿಖೆ ಮಾಡಿ ಎಂದು ಹೇಳಬಹುದೇ ವಿನಹ ಹೀಗೆ ಮಾಡಿ ಹಾಗೇ ಮಾಡಿ ಎಂದು ಹೇಳೋಕೆ ಆಗಲ್ಲ ಎಂದರು.