ಧರ್ಮಸ್ಥಳ : ಧರ್ಮಸ್ಥಳ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಮುಸುಕುಧಾರಿ ವ್ಯಕ್ತಿಯನ್ನು ಎಸ್‌ಐಟಿ ಇಂದು ಬೆಳಗ್ಗೆ ಬಂಧಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ ಮುಸುಕುಧಾರಿ ವ್ಯಕ್ತಿಯ ನಂಬಿ ಸರ್ಕಾರ ವಿಶೇಷ ತನಿಖಾ ತಂಡ ರಕ್ಷಿಸಿತ್ತು. ಈ ತಂಡ ಆತ ತೋರಿಸಿದ 17 ಜಾಗಗಳಲ್ಲಿ ಅಗೆದರೂ ಶವದ ಕುರುಹುಗಳು ಪತ್ತೆಯಾಗಿಲ್ಲ.
ಅನಾಮಿಕ ತೋರಿಸಿದ 17 ಪಾಯಿಂಟ್‌ಗಳಲ್ಲಿ ಏನೂ ಸಿಗದಿದ್ದ ಹಿನ್ನೆಲೆ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ ಮುಸುಕುಧಾರಿ ವಿರುದ್ಧವೇ ರಿವರ್ಸ್ ತನಿಖೆ ಶುರು ಮಾಡಿತ್ತು. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ್ದರು. ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದರು.
‘ಅನಾಮಿಕ ದೂರುದಾರನ ಮುಂದೆ ವೀಡಿಯೋ ಪ್ರದರ್ಶನ ಮಾಡಿ ತನಿಖೆ ಪ್ರಕ್ರಿಯೆಯನ್ನೂ ಮುಂದುವರಿಸಿದ್ದರು. ಇಷ್ಟೆಲ್ಲಾ ತನಿಖೆ ಬಳಿಕ ಮುಸುಕುಧಾರಿ ಹೆಣೆದಿದ್ದು ಸುಳ್ಳಿನ ಬಲೆ ಎಂಬುದು ಸಾಬೀತಾಗಿದೆ. ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ತಿಳಿಯುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಡೀ ಮುಸುಕುಧಾರಿಯನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಸ್ವತಹ ವಿಚಾರಣೆ ನಡೆಸಿದ್ದಾರೆ . ಬಳಿಕ ಎಸ್‌ಐಟಿ ಹೆಚ್ಚಿನ ವಿಚಾರಣೆಗಾಗಿ ಅವನನ್ನು ಔಪಚಾರಿಕ ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ದೇವಸ್ಥಾನದ ವಿರೋಧಿ ಗ್ಯಾಂಗ್ ಸಂಪರ್ಕಿಸಿತ್ತು. ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ ಎಂದು ಹೇಳಿದ್ದರು.
ಯಾವುದೇ ಕಾರಣಕ್ಕೂ ನೀನು ಭಯ ಪಡುವ ಅಗತ್ಯವಿಲ್ಲ. ತನಿಖೆಯಾದ ನಂತರ ಹಲವು ಜನ ದೂರುದಾರರು ಬರುತ್ತಾರೆ. ಎಲ್ಲ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದ್ದರು.
ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ಸ್ವಲ್ಪ ತರಬೇತಿ ನೀಡಲಾಗಿತ್ತು. ಪೊಲೀಸರು ಕೇಳಿದಾಗ ಯಾವ ರೀತಿ ಉತ್ತರ ಹೇಳಬೇಕು ಎನ್ನುವುದನ್ನು ತಿಳಿಸಲಾಗಿತ್ತು. ನಂತರ ಸೂತ್ರಧಾರರು ಹೇಳಿದಂತೆ ನಾನು ಪಾತ್ರ ಮಾಡುತ್ತಿದ್ದೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ ಎಂದು ಚಿನ್ನಯ್ಯ ತಿಳಿಸಿದ್ದ.