ಧರ್ಮಸ್ಥಳದ ಅರಣ್ಯದಲ್ಲಿ ಹೆಣಗಳ ರಾಶಿಯನ್ನೇ ಹೂತಿದ್ದೇನೆ ಎಂದು ಆರೋಪ ಮಾಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಮುಖವಾಡ ಇದೀಗ ಕಳಚಿ ಬಿದ್ದಿದೆ ಎನ್ನಲಾಗ್ತಿದೆ. ಎಸ್ಐಟಿ ವಿಚಾರಣೆಯಲ್ಲಿ ಚಿನ್ನಯ್ಯನ ಆಟ ಬಯಲಾಗಿದೆ ಎಂದು ತಿಳಿದು ಬಂದಿದೆ. ರಾತ್ರಿಯಿಡಿ ನಡೆದ ಎಸ್ಐಟಿ ತನಿಖೆಯಲ್ಲಿ ಸಮಾಧಿ ರಹಸ್ಯ ಬಯಲಾಗಿದೆ. 1 ವರ್ಷದ ಹಿಂದೆಯೆ ಉಜಿರೆಗೆ ಬಂದಿದ್ದ ಚಿನ್ನಯ್ಯ ಯಾರ ಜೊತೆ ಸೇರಿ ಈ ಪ್ಲಾನ್ ಮಾಡಿದ್ದ ಗೊತ್ತಾ?
ಮಾಸ್ಕ್ ಮ್ಯಾನ್ ತೋರಿಸಿದ ಜಾಗವನ್ನೆಲ್ಲಾ ಅಗೆದು ನೋಡಿದ ಎಸ್ಐಟಿ ಟೀಮ್ಗೆ ಏನು ಸಿಗಲಿಲ್ಲ. ಉತ್ಖನನಕ್ಕೆ ಬ್ರೇಕ್ ಹಾಕಿದ ಎಸ್ಐಟಿ ಕಳೆದೊಂದು ವಾರದಿಂದ ಅನಾಮಿಕ ವಿಚಾರಣೆ ನಡೆಸಿದೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೂ ವಿಚಾರಣೆ ನಡೆಸಿದ್ದು, ಈತನ ಮುಖವಾಡ ಕಳಚಿ ಬೀಳ್ತಿದ್ದಂತೆ ಚಿನ್ನಯ್ಯುನನ್ನು ಬಂಧಿಸಲಾಗಿದೆ.
ಬೆಳ್ತಂಗಡಿ ಕೋರ್ಟ್‌ಗೆ ಚಿನ್ನಯ್ಯನನ್ನು ಹಾಜರು ಪಡಿಸಲು SIT ಮುಂದಾಗಿದೆ. ಈ ತನಿಖೆ ವೇಳೆ ಹಲವರ ಹೆಸರನ್ನ ಬಾಯಿಬಿಟ್ಟಿರೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅವರ ಬಗ್ಗೆ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಬೇಕಿದ್ದು, ಕಸ್ಟಡಿಗೆ ಪಡೆದ ಬಳಿಕ ಮತ್ತಷ್ಟು ಜನರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಬೆಳಗ್ಗೆ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯ ಬಳಿಕ, ಆರೋಪಿಯನ್ನು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಜೆಎಂಎಫ್‌ಎಸ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ಬಂಧಿತ ಆರೋಪಿ ಮಂಡ್ಯ ಜಿಲ್ಲೆಯ ಸಿ.ಎನ್. ಚಿನ್ನಯ್ಯ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶುಕ್ರವಾರ (ಆ. 22) ದೂರುದಾರ ಮತ್ತು ಈ ಹಿಂದೆ ಅನಾಥ ಶವಗಳ ಪೋಸ್ಟ್‌ಮಾರ್ಟಂ ಮಾಡಿದ್ದ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ಶನಿವಾರ ಪ್ರಮುಖ ದೂರುದಾರ ‘ಮಾಸ್ಕ್ ಮ್ಯಾನ್’ನನ್ನು ಬಂಧಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಶವಗಳನ್ನು ತಾನು ಹೂತಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನ ಮುಖವಾಡ ಇದೀಗ ಕಳಚಿ ಬಿದ್ದಿದೆ. ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ 10 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಲು ಎಸ್ಐಟಿ ಮನವಿ ಮಾಡಿತ್ತು.
ಎಸ್ಐಟಿ ಮನವಿಯಂತೆ ನ್ಯಾಯಾಧೀಶರು ಚಿನ್ನಯ್ಯನನ್ನು 10 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಚಿನ್ನಯ್ಯನನ್ನು ಎಸ್ಐಟಿ ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು, ಮಾಸ್ಕ್ ಮ್ಯಾನ್ ಹಿಂದಿರುವ ನಿಗೂಢ ಕೈವಾಡಗಳು ಕೂಡ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.