ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ದರ್ಬೆ ನಿಗರ್ ಗುಂಡಿ ಎಂಬಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಪರಿಸರದ ನಿವಾಸಿಗರನ್ನು ಭೀತಿಗೊಳಪಡಿಸಿದೆ. ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಕೇರಿ, ಬಾರ್ತೊಳಿ ಪ್ರದೇಶಗಳಲ್ಲಿ ಬಂದ ನಿನ್ನೆ ನೆಕ್ಕಿಲಾಡಿ ಗ್ರಾಮದ ಕೊಳಕ್ಕೆ ಕಡೆ ಪತ್ತೆ ಯಾಗಿತ್ತು, ರಾತ್ರಿ ಹಿರೇಬಂಡಾಡಿ ಹೊರಟ ಆನೆ ನದಿಯಲ್ಲಿ ನೀರು ಜಾಸ್ತಿ ಇದ್ದ ಕಾರಣ ಯೂ ಟರ್ನ್ ಹೊಡೆದು,ಬೆಳ್ಳಿಪ್ಪಾಡಿಯಾಗಿ ನೆರಿಮೊಗರು ಗ್ರಾಮದ ಅನಡ್ಕ ತಲುಪಿದ ಮಾಹಿತಿ ಅರಣ್ಯ ಇಲಾಖೆಯಿಂದ ಲಭ್ಯ ವಾಗಿದೆ.
ನೆಕ್ಕಿಲಾಡಿ ಪರಿಸರದ ಕೆಲ ಮಂದಿ ಎಂದಿನಂತೆ ಮೀನು ಹಿಡಿಯಲೆಂದು ನದಿಯತ್ತ ಸಾಗಿದಾಗ ನದಿ ಪರಿಸರದಲ್ಲಿ ಆನೆಗಳ ಹೆಜ್ಜೆ ಗುರುತು ಕಂಡು ಬಂದಿತು. ಸಂದೇಹ ಮೂಡಿ ಪರಿಶೀಲಿಸಿದಾಗ ನದಿಯಲ್ಲೇ ಒಂದು ಮರಿ ಆನೆ ಮತ್ತು ತಾಯಿ ಆನೆ ಜೊತೆಗೂಡಿ ಇರುವುದು ಕಂಡಿದೆ.
ಸಾಯಂಕಾಲದ ವರೆಗೂ ಎರಡೂ ಆನೆಗಳು ನದಿಯಲ್ಲಿ ನೀರಾಟವಾಡುತ್ತಾ ವಿಹರಿಸುತ್ತಿತ್ತು. ಬಳಿಕ ಆನೆಯು ದರ್ಬೆ ಪರಿಸರದತ್ತ ಬಂದಿತು. ಬಳಿಕ ಅರಣ್ಯಾಧಿಕಾರಿಗಳ ತಂಡವು ಸ್ಥಳಕ್ಕೆ ಬಂದಿದ್ದು, ರಾತ್ರಿಯೂ ಆನೆಯನ್ನು ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಆನೆಯು ರಾತ್ರಿಯ ಹೊತ್ತು ಕಾಡಿನೊಳಗೆ ಸೇರಿಕೊಂಡಿದೆ. ಇದು ನರಿಮೊಗರು ಕಡೆಯಿಂದ ಕಟಾರವಾಗಿ ದರ್ಬೆ ಕಡೆಗೆ ಬಂದಿರಬಹುದೆಂದು ಶಂಕಿಸಲಾಗಿದೆ.
ಕುಮಾರಧಾರ ನದಿಯ ಒಂದು ಪಾರ್ಶ್ವದಲ್ಲಿ ನೆಕ್ಕಿಲಾಡಿ ಗ್ರಾಮವಿದ್ದು, ಮತ್ತೊಂದು ಕಡೆಯಲ್ಲಿ ಹಿರೇಬಂಡಾಡಿ ಗ್ರಾಮವಿದೆ. ಆನೆಗಳು ಯಾವ ಪಾರ್ಶ್ವಕ್ಕೆ ಕಾಲಿರಿಸುತ್ತದೆ ಎನ್ನುವ ಭೀತಿಯಲ್ಲೇ ಪರಿಸರದ ಜನ ದಿನ ಕಳೆಯುವಂತಾಗಿದೆ.ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಕುಮಾರ್ ನೇತೃತ್ವದ ಆನೆ ಓಡಿಸುವ ತಂಡದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜ್, ಅರಣ್ಯಾಧಿಕಾರಿಗಳಾದ ಉಲ್ಲಾಸ, ಕಾಜಿಸಾಬ್, ಸುಧೀರ್ ಹೆಗ್ಡೆ, ಸತೀಶ್ ಡಿಸೋಜ, ದೇವಿಪ್ರಸಾದ್, ರಾಜೇಶ್ ಇದ್ದರು. ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯಿಂದ ಮತ್ತು ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.