ಕನ್ನಡ ಚಿತ್ರರಂಗಕ್ಕೆ ಇದು ನೋವಿನ ಸುದ್ದಿ. ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ಅವರು ನಿಧನರಾಗಿದ್ದಾರೆ. ಇಂದು (ಆಗಸ್ಟ್ 25) ಕುಂದಾಪುರದಲ್ಲಿ ಬೆಳಗಿನಜಾವ ಅವರು ಕೊನೆಯುಸಿರು ಎಳೆದಿದ್ದಾರೆ. ಮನೆಯಲ್ಲೇ ಅವರು ನಿಧನರಾದರು. ‘ಆ ದಿನಗಳು’, KGF’, ‘ಉಳಿದವರು ಕಂಡಂತೆ’, ‘ಕಿಚ್ಚ’, ‘ಕಿರಿಕ್ ಪಾರ್ಟಿ’ ಮುಂತಾದ ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ಅವರು ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಅವರು ಗುರುತಿಸಿಕೊಂಡಿದ್ದರು. ದಿನೇಶ್ ಮಂಗಳೂರು ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.
ಬಣ್ಣದ ಲೋಕದಲ್ಲಿ ದಿನೇಶ್ ಮಂಗಳೂರು ಅವರು ಅಪಾರ ಅನುಭವ ಹೊಂದಿದ್ದರು. ‘ಕಾಂತಾರ’ ಚಿತ್ರದ ಶೂಟಿಂಗ್ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಒಂದು ವಾರದ ಹಿಂದೆ ಅವರು ಮತ್ತೆ ಅಸ್ವಸ್ಥರಾಗಿದ್ದರು. ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಟ ಮಂಗಳೂರು ದಿನೇಶ್ ಮರಣ ಹೊಂದಿದ್ದಾರೆ.