ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಕಪೋಲಕಲ್ಪಿತ ಘಟನೆ ಸೃಷ್ಟಿಸಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಹುನ್ನಾರದ ವಿರುದ್ಧ ಪುತ್ತೂರಿನಲ್ಲಿ ಸೆ.1ರಂದು ಜನಾಗ್ರಹ ಸಮಾವೇಶ ನಡೆಸಲು ಆ.24ರಂದು ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರದಲ್ಲಿ ನಡೆದ ಭಕ್ತರ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಪುತ್ತೂರು ತಾಲೂಕಿನಲ್ಲಿ ನಡೆಯಲಿರುವ ಸಮಾವೇಶದ ಉಸ್ತುವಾರಿ ವಹಿಸಿಕೊಂಡಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಸೆ.1 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ಹಾಕಿರುವ ಗಣೇಶೋತ್ಸವ ಸಮಿತಿ ಚಪ್ಪರದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ನಡೆಯಲಿರುವ ಸಮಾವೇಶದ ಉಸ್ತುವಾರಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಹಾಗೂ ಇತ್ತೀಚನ ಮೂರ‍್ನಾಲ್ಕು ತಿಂಗಳಿನಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಗುರುವಾರ ಮೋಹನ್ ಆಳ್ವರ ನೇತೃತ್ವದಲ್ಲಿ ಎರಡು ಜಿಲ್ಲೆಯ ಸುಮಾರು 100 ಮಂದಿ ಪ್ರಮುಖರು ಧರ್ಮಸ್ಥಳದಲ್ಲಿ ಸೇರಿದ್ದೆವು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪದ್ಮನಾಭ ಶೆಟ್ಟಿ, ಲೋಕೇಶ್ ಹೆಗ್ಡೆ, ಮಹಾಬಲ ರೈ ವಳತ್ತಡ್ಕ ಸಹಿತ ಹಲವಾರು ಮಂದಿ ಖಾವಂದರಲ್ಲಿ ಮಾತನಾಡಿದ್ದೇವೆ. ಶ್ರೀ ಕ್ಷೇತ್ರ ಎಲ್ಲಾ ಕ್ಷೇತ್ರದಲ್ಲೂ ಸಹಕಾರ ನೀಡುತ್ತಿದೆ. ಶೈಕ್ಷಣಿಕ ಸಹಿತ ಇತರೇ ಕ್ಷೇತ್ರದಲ್ಲಿ ಸರಕಾರದ ಅಭಿವೃದ್ಧಿ ಕೆಲಸಕ್ಕಿಂತಲೂ ಹೆಚ್ಚು ಕೆಲಸ ಡಾ| ಡಿ.ವೀರೇಂದ್ರ ಹೆಗ್ಡೆಯವರು ಮಾಡಿದ್ದಾರೆ. ಹಳ್ಳಿಯ ಅಭಿವೃದ್ದಿಗೆ ಮೂಲ ಕಾರಣರಾಗಿದ್ದಾರೆ. ಆದ್ದರಿಂದ ತಾಲೂಕು ಕೇಂದ್ರಗಳಲ್ಲಿ ಸಮಾವೇಶ ಮಾಡಿ ಖಾವಂದರಿಗೆ ಬಲ ನೀಡುವ ಕೆಲಸ ಮಾಡಬೇಕಾದ ಜವಾಬ್ದಾರಿಯ ನಿರ್ಣಯವನ್ನು ಆ ಸಭೆಯಲ್ಲಿ ಕೈಗೊಳ್ಳಲಾಯಿತು. ಇವತ್ತು ಸುಮಾರು 350ಕ್ಕೂ ಹೆಚ್ಚು ಜನರು ಕೇವಲ ಪೋನ್ ಕರೆಗೆ ಬಂದಿದ್ದಾರೆ. ಮುಂದೆ ಸಮಾವೇಶಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.
ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುವ ಸಮಾವೇಶದ ಜವಾಬ್ದಾರಿ ವಹಿಸಿಕೊಂಡಿರುವ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ವಾಸ್ತವ ಅಂಶಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಧರ್ಮಸ್ಥಳವು ಕೇವಲ ಪೂಜೆಗೆ ಸೀಮಿತವಾಗಿ ಇರಬಹುದಿತ್ತು. ಆದರೆ ಅವರು ಜನಜಾಗೃತಿ ಶಿಬಿರ ಮಾಡುವ ಮೂಲಕ ರಾಜ್ಯ ಸರಕಾರಕ್ಕೆ ಮೂಲ ಪ್ರೇರಣೆಯಾದರು. ಹಳ್ಳಿಯ ದೇವಸ್ಥಾನಕ್ಕೆ ಅನುದಾನ ನೀಡುವ ಮೂಲಕ ಮಹತ್ವದ ಕಾರ್ಯ ಮಾಡಿದ್ದರು. ಧರ್ಮಕ್ಷೇತ್ರಗಳ ಪುನರುತ್ಥಾನ, ಶೈಕ್ಷಣಿಕ ಸಂಸ್ಥೆಗಳಿಗೂ ಸಹಕಾರ, ಮಹಿಳೆಯರಿಗೆ ಸ್ವಾಭಿಮಾನದ ಬದಕು ಕಲ್ಪಿಸಿದೆ. ಸರಕಾರ ಏನೇನು ಮಾಡಬಹುದಾ ಅದನ್ನು ಧರ್ಮಸ್ಥಳ ಮಾಡಿದೆ. ಇದು ವೀರೇಂದ್ರ ಹೆಗ್ಡೆಯವರ ಹೆಮ್ಮೆಯಲ್ಲ. ಸಮಸ್ತ ಹಿಂದೂ ಸಮಾಜಕ್ಕೆ ಹೆಮ್ಮೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಿ ಗುಡಿಯ ಪೂರ್ಣ ಖರ್ಚನ್ನು ಧರ್ಮಸ್ಥಳ ಮಾಡಿದೆ. ಇಷ್ಟೆಲ್ಲಾ ಸಮಾಜಮುಖಿ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಷಡ್ಯಂತ್ರ ನಾಳೆ ಪುತ್ತೂರು, ನಾಡಿದ್ದು ಕಟೀಲಿಗೆ ಬರಬಹುದು. ಈ ನಿಟ್ಟಿನಲ್ಲಿ ನಾವು ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು. ಜನರ ಮನಸ್ಸು ಕೆಡಿಸುತ್ತಿರುವ ಆ ಕೆಟ್ಟ ಮನಸ್ಸುಗಳನ್ನು ಸರಿ ದಾರಿಗೆ ತರಬೇಕು. ಸೌಜನ್ಯಗೂ ನ್ಯಾಯ ಸಿಗಬೇಕು. ಎಸ್‌ಐಟಿ ತನಿಖೆ ಆಗುತ್ತಿದೆ. ಇನ್ನು ನ್ಯಾಯಾಲಯದಲ್ಲೂ ವಿಚಾರಣೆ ನಡೆಯಬಹುದು. ಇದರ ನಡುವೆ ಬುರುಡೆ ಎಲ್ಲಿಂದ ಬಂತು. ಅನನ್ಯ ಎಲ್ಲಿ ಸೃಷ್ಟಿ ಆಯಿತು. ಕಟ್ಟು ಕಥೆಯಿಂದ ಕ್ಷೇತ್ರಕ್ಕೆ ಹೇಗೆ ಹೊಡೆತ ಬಿದ್ದಿದೆ ಎಂಬ ಸತ್ಯ ಜನರಿಗೆ ತಿಳಿಸಬೇಕಾಗಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಕೆಲ ವರ್ಷದ ಹಿಂದೆ ತಿರುಪತಿ, ಶಬರಿಮಲೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು. ಈಗ ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ ಆಗುತ್ತಿದೆ. ನಾವು ಸುಮ್ಮನಿದ್ದರೆ ನಾಳೆ ನಮ್ಮ ಮನೆ ಬಾಗಿಲಿಗೂ ಅಪಪ್ರಚಾರ ಬರಬಹುದು. ಅದಕ್ಕೆ ಮೊದಲು ನಾವು ಎಚ್ಚೆತ್ತು ಕೊಳ್ಳಬೇಕು.ಭಜನಾ ಮಂದಿರದ ಮುಖ್ಯಸ್ಥರು, ದೈವಸ್ಥಾನ, ತರವಾಡು ಮನೆತನ ಎಲ್ಲರನ್ನೂ ಒಟ್ಟು ಸೇರಿಸಿ ಪ್ರತಿಭಟನೆ ರೂಪದಲ್ಲಿ ಎಚ್ಚರಿಕೆ ನೀನಿಡುವ ಕೆಲಸ ಆಗಬೇಕು ಎಂದರು.
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಹಿಂದುಗಳು ನಂಬಿಕೆ ಆಧಾರದಲ್ಲಿ ಬದುಕುವವರು. ಆದರೆ ನಂಬಿಕೆಗಳ ಮೇಲೆ ದ್ರೋಹ ನಡೆದಾಗ ನಾವು ಪ್ರತಿರೋಧ ಮಾಡದಿದ್ದರೆ ನಾವು ಕೂಡ ಪಾಪಿಗಳಾಗುತ್ತೇವೆ. ನಾವೆಲ್ಲ ಒಂದಾಗಿ ಪಕ್ಷ ಬೇಧ ಮರೆತು ಧರ್ಮಸ್ಥಳದ ವಿಚಾರದಲ್ಲಿ ಕೊನೆಯ ತನಕ ಕಾಣಿಸಬೇಕು. ಈ ಷಡ್ಯಂತ್ರದ ವಿರುದ್ಧ ಎನ್‌ಐಎ ತನಿಖೆಗೆ ನಾವು ಆಗ್ರಹಿಸಬೇಕು. ಕ್ಷೇತ್ರಕ್ಕೆ ಆದ ಅವಮಾನ ನಮಗೆ ಆದ ಅವಮಾನದಂತೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ನಡೆಯುವ ಸಮಾವೇಶ ವಿರೋಧಿಗಳಿಗೆ ಉತ್ತರ ನೀಡುವಂತಿರಬೇಕೆಂದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ಪಕ್ಷ ನೋಡದೆ ಮಹಾಲಿಂಗೇಶ್ವರ ದೇವರ ಭಕ್ತರಾಗಿ, ಧರ್ಮಸ್ಥಳದ ಭಕ್ತರಾಗಿ ಇಲ್ಲಿ ಸೇರಿರುವುದು ಸಂತೋಷ. ಎಷ್ಟೋ ಮಂದಿ ಭಕ್ತರು, ಪಕ್ಷದವರು ಇಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಯಾರೇ ಬರಲಿ ನಮ್ಮ ಸಮಿತಿ ಅವರನ್ನು ಮಹಾಲಿಂಗೇಶ್ವರ ದೇವರ ಭಕ್ತರನ್ನಾಗಿ ಕಾಣುತ್ತೇವೆ. ಸಮಾವೇಶಕ್ಕೆ ಏನು ಬೇಕೋ ಅದಕ್ಕೆ ಸಹಕಾರ ನೀಡುತ್ತೇವೆ. ಧರ್ಮಸ್ಥಳದ ವಿಚಾರದಲ್ಲಿ ಅಪಮಾನ ಮಾಡುವುದು ನಿಲ್ಲಬೇಕು. ಅದಕ್ಕೆ ಎಸ್‌ಐಟಿ ತನಿಖೆ ಆಗಬೇಕು. ಸೌಜನ್ಯಳಿಗೆ ನ್ಯಾಯ ಸಿಗಬೇಕು. ಸಮಾವೇಶದ ಮೂಲಕ ರಾಜ್ಯವೇ ಪುತ್ತೂರಿನತ್ತ ನೋಡುವ ಕೆಲಸ ಕಾರ್ಯ ಭಕ್ತರಿಂದ ಆಗಬೇಕೆಂದು ಹೇಳಿದರು.
ಶಶಿಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಧರ್ಮಸ್ಥಳ ಮತ್ತು ಧರ್ಮಾಽಕಾರಿಗಳ ವಿರುದ್ದ ಕಪೋಲಕಲ್ಪಿತ ಘಟನೆ ಸೃಷ್ಟಿಸಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಖಂಡನೆ ಮಾಡಬೇಕೆಂಬ ನಿಟ್ಟಿನಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಮೊಹನ್ ಆಳ್ಚರ ನೇತೃತ್ವದಲ್ಲಿ ಸಭೆ ಮಾಡಿದಾಗ ಜನಾಂದೋಲನದ ಮೂಲಕ ಖಂಡನೆ ವ್ಯಕ್ತಪಡಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಭಕ್ತರ ಸಮಾವೇಶ ಮಾಡುವ ಸಂಬಂಧ ಅಭಿಪ್ರಾಯ, ಸಲಹೆ ಪಡೆಯಲು ಈ ತುರ್ತು ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ ಜಯರಾಮ ರೈ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ರೈ ಎಸ್ಟೇಟ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಅಶ್ವಿನ್ ರೈ ಸವಣೂರು, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ, ವಿಶ್ಚಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ನಗರಸಭಾ ಸದಸ್ಯ ಜೀವಂಧರ್ ಜೈನ್, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕಡಬ, ಅಜಿತ್ ಪ್ರಸಾದ್ ರೈ, ಸದಾಶಿವ ರೈ ಸೂರಂಬೈಲು, ವಿಶ್ವೇಶ್ವರ ಭಟ್ ಬಂಗಾರಡ್ಕ, ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಸತೀಶ್ ನಾಕ್ ಪರ್ಲಡ್ಕ, ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ರಾಜೇಶ್ ರೈ ಪರ್ಪುಂಜ, ಜಗನ್ನಾಥ ರೈ ಕೋರ್ಮಂಡ, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ, ಮಮತಾ ರೈ ಕೆಯ್ಯೂರು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ, ಯುವರಾಜ್ ಪೆರಿಯತ್ತೊಡಿ, ಹರಿಪ್ರಸಾದ್, ಮಹಾವೀರ ಆಸ್ಪತ್ರೆಯ ಡಾ. ಅಶೋಕ್ ಪಡಿವಾಳ್, ದೀಕ್ಷಾ ಪೈ, ಪೂರ್ಣಿಮಾ, ಯಶೋಧಾ, ರಾಮಣ್ಣ ಗೌಡ ಗುಂಡೋಲೆ ಸಹಿತ ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.