ಪುತ್ತೂರು: ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯ ಅವರ ಸಾಕುದನವನ್ನು ಕದ್ದು ಮನೆಯಿಂದ ಸುಮಾರು ೫೦೦ ಮೀಟರ್ ದೂರದಲ್ಲಿ ದನ್ನು ಹತ್ಯೆ ಮಾಡಿ ಕೊಂದು ಸಾಗಾಟ ಮಾಡಿದ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದ್ದು ಯಾವ ಸಮಾಜವು ಇದನ್ನು ಬೆಂಬಲಿಸುವುದಿಲ್ಲ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವೂ ಇದರ ಹಿಂದೆ ಇದ್ದು ಪೊಲೀಸರು ಆರೋಪಿಯನ್ನು ತಕ್ಷಚಣ ಬಂಧಿಸಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಶುಕ್ರವಾರ ಸಂಜೆ ಘಟನೆ ನಡೆದ ದೇಜಪ್ಪ ಮೂಲ್ಯ ಅವರ ಮನೆಗೆ ಭೇಟಿ ಮನೆ ಮಂದಿಯಿಂದ ಮಾಹಿತಿ ಪಡೆದ ಶಾಸಕರು ಹಸುವನ್ನು ಕೊಟ್ಟಿಗೆಯಿಂದ ಕದ್ದು ಅದನ್ನು ಹತ್ಯೆ ಮಾಡಿರುವುದು ಯಾವ ಸಮಾಜ ಕೂಡ ಒಪ್ಪದ ಹೇಯ ಕೃತ್ಯವಾಗಿದೆ. ಆರೋಪಿಗಳನ್ನು ಶುಕ್ರವಾರ ಸಂಜೆಯೊಳಗೆ ಬಂಧಿಸುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದ್ದೇನೆ. ಜಿಲ್ಲಾ ಎಸ್ ಪಿ ಜೊತೆ ಬೆಳಿಗ್ಗೆ ಮಾತನಾಡಿದ್ದೇನೆ.ಆರೋಪಿಗಳೇ ಯಾರೇ ಆದರೂ ಅವರನ್ನು ಸುಮ್ಮನೆ ಬಿಡಬಾರದು ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಮುಂದೆ ಕೊಟ್ಟಿಗೆಯಿಂದ ಹಸುವನ್ನು ಕದ್ದು ಕೊಂಡೊಯ್ಯುವವರಿಗೆ ಪೊಲೀಸರು ಕೊಡುವ ಶಿಕ್ಷೆ ಪಾಠವಾಗಬೇಕು, ಮುಂದೆಂದೂ ಇಂಥಹ ಹೀನ ಕೃತ್ಯ ನಮ್ಮ ಕ್ಷೇತ್ರ ಹಾಗೂ ಎಲ್ಲೂ ನಡೆಯಬಾರದು ಎಂದು ಶಾಸಕರು ಹೇಳಿದರು.
ನಾಲ್ಕು ತಿಂಗಳ ಗಬ್ಬದ ಹಸು
ರಾತ್ರಿ ಸುಮಾರು ಎರಡು ಗಂಟೆಗೆ ಹಸು ಕೊಟ್ಟಿಗೆಯಲ್ಲಿ ಕೂಗಿದ ಶಬ್ದ ಕೇಳಿದೆ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮಾರನೇ ದಿನ ಬೆಳಿಗ್ಗೆ ನೋಡುವಾಗ ನಮ್ಮ ಹಸು ಕೊಟ್ಟಿಗೆಯಲ್ಲಿ ಇರಲಿಲ್ಲ. ರಸ್ತೆ ಆಚೆ ಬದಿಯಲ್ಲಿದ್ದ ನಮ್ಮ ತೋಟದ ದಾರಿಯಲ್ಲಿ ನನ್ನ ಮಗಳು ತೋಟಕ್ಕೆ ಹೋಗುವಾಗ ದನದ ಕರುಳು ಪತ್ತೆಯಾಗಿತ್ತು. ಆ ಬಳಿಕ ನಾವು ಪೊಲೀಸರಿಗೆ ದೂರು ನೀಡಿದ್ದೆವು. ನಮ್ಮಲ್ಲಿ ನಾಲ್ಕೈದು ಹಸು ಇತ್ತು ಸಾಕಲು ಕಷ್ಟವಾಗುತ್ತದೆ ಎಂದು ಮಾರಿದ್ದೆವು. ವಾರಗಳ ಹಿಂದೆ ವ್ಯಕ್ತಿಯೋರ್ವರು ಹಸು ಮಾರಾಟ ಮಾಡುತ್ತೀರ ಎಂದು ಕೇಳಿ ಹೋಗಿದ್ದರು, ನಾವು ಕೊಡುವುದಿಲ್ಲ ಎಂದು ಹೇಳಿದ್ದೆವು. ಈಗ ಈರೀತಿಯಾಗಿದೆ ಎಂದು ದೇಜಪ್ಪ ಮೂಲ್ಯರು ಶಾಸಕರಲ್ಲಿ ತಿಳಿಸಿದರು.
ಅತ್ಯಂತ ಬೇಸರವಾಗಿದೆ
ನಾಲ್ಕು ತಿಂಗಳ ಗಬ್ಬದ ಹಸುವನ್ನು ಕದ್ದು ಹತ್ಯೆ ಮಾಡಿದ ಘಟನೆ ತಿಳಿದು ನನಗೆ ಅತ್ಯಂತ ದುಖವಾಗಿದೆ. ಈ ಕೃತ್ಯವನ್ನು ಕೇವಬಲ ಖಂಡಿಸುವುದು ಮಾತ್ರವಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ತನಕ ಸುಮ್ಮನೆ ಕೂರುವುದಿಲ್ಲ. ನಮ್ಮ ದೇಶದಲ್ಲಿ ಕಾನೂನು ಸ್ವಲ್ಪ ಸ್ಟ್ರಾಂಗ್ ಆಗಬೇಕು. ಹೀನ ಕೃತ್ಯ ಮಾಡುವವರ ವಿರುದ್ದ ಕಠಿಣ ಕಾನೂನು ಬಳಸದೇ ಇದ್ದರೆ ಇಂಥಹ ಘಟನೆಗಳು ಮರುಕಳಿಸುತ್ತದೆ ಆ ರೀತಿ ಆಗದಂತೆ ಬಲಿಷ್ಠ ಕಾನೂನು ಜಾರಿಯಾಗಬೇಕಿದೆ ಎಂದು ಹೇಳಿದರು.
ಅಶಾಂತಿಯ ಹುನ್ನಾರ ಕೃತ್ಯದ ಹಿಂದೆ ಇದೆ
ಜಿಲ್ಲೆಯಲ್ಲಿ ಈಗ ಸ್ವಲ್ಪ ನೆಮ್ಮದಿಯಿಂದ ಜನ ಬದುಕುತ್ತಿದ್ದಾರೆ ಈ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ. ಇದರ ಹಿಂದೆ ಅಶಾಂತಿಯ ಹುನ್ನಾರ ಇರುವುದು ಸ್ಪಷ್ಟವಾಗಿದೆ. ಆದರೆ ಜಿಲ್ಲೆಯ ಪೊಲೀಸರು ಸಮರ್ಥರಿದ್ದಾರೆ ಆರೋಪಿಗಳ ಹೆಡೆಮುರಿ ಕಟ್ಟಿಯೇ ಕಟ್ಟುತ್ತಾರೆ ಎಂದು ಹೇಳಿದರು.
ಆರೋಪಿಗಳ ಕೈ ಕಡಿಯಬೇಕು
ಆರೋಪಿಗಳು ಯಾರೇ ಆಗಿದ್ದರೂ ಅವರ ಕೈ ಕಡಿಯುವ ಮೂಲಕ ಇಂಥಹ ಹೇಯ ಕೃತ್ಯ ಮಾಡುವರಿಗೆ ಪಾಠವಾಗಬೇಕು ಎಂದು ಹೇಳಿದರು.
ಹಸು ಖರೀದಿಸಲು ಹತ್ತು ಸಾವಿರ ಕೊಡುತ್ತೇನೆ
ನಿಮ್ಮ ಹಸುವನ್ನು ಕದ್ದು ಹತ್ಯೆ ಮಾಡಿರುವುದು ನನಗೆ ಅತ್ಯಂತ ದುಖವನ್ನು ತಂದಿದೆ. ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಶಾಸಕನಾದ ನೆಲೆಯಲ್ಲಿ ನಿಮ್ಮ ನೋವಿಗೆ ನಾನು ಸ್ಪಂದಿಸುತ್ತೇನೆ. ನಿಮಗೆ ಹಸು ಖರೀದಿಸಲು ನಾನು ಹತ್ತು ಸಾವಿರ ಕೊಡುತ್ತೇನೆ ಎಂದು ಶಾಸಕರು ದೇಜಪ್ಪ ಮೂಲ್ಯ ಅವರಿಗೆ ತಿಳಿಸಿದರು.
ಈ ವೇಳೆ ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್,ಪೆರ್ನೆ ಗ್ರಾಪಂ ಅಧ್ಯಕ್ಷೆ ವಿಜಯ, ಸದಸ್ಯರಾದ ತನಿಯಪ್ಪ ಪೂಜಾರಿ, ಸುನಿಲ್ ನೆಲ್ಸನ್ ಪಿಂಟೋ, ಮಾಜಿ ಅಧ್ಯಕ್ಷ ಅಬ್ದುಲ್ ಶಾಫಿ,ಮಿತ್ರದಾಸ ರೈ, ಸೀತಾರಮಾ ಶೆಟ್ಟಿ, ರಾಜಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.