ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. ಪ್ರೀ ಪ್ಲಾನ್ ಮಾಡಿಯೇ ಗಣೇಶ ಮೆರವಣಿಗೆ ಮಸೀದಿ ಬಳಿ ಬರುತ್ತಿದ್ದಂತೆಯೇ ಕಲ್ಲು ತೂರಾಟ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿದ್ದಾರೆ.
ಇನ್ನೊಂದೆಡೆ ಸ್ವತಃ ಗೃಹ ಸಚಿವ ಪರಮೇಶ್ವರ್ ಸಹ ಇದೊಂದು ಪೂರ್ಣ ನಿಯೋಜಿತ ಕೃತ್ಯ ಎಂದು ಹೇಳಿದ್ದಾರೆ. ಈ ಸಂಬಂಧ ಕಲ್ಲು ತೂರಿದ್ದ ಈಗಾಗಲೇ ಪೊಲೀಸರು, 21 ಮುಸ್ಲಿಮರನ್ನು ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಗಳ ವಿರುದ್ಧ BNS ಕಾಯ್ದೆ 189(2), 189(4), 121(2), 132ರ ಹಾಗೂ 190ರ ಅಡಿ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಮೊಹಮ್ಮದ್ ಆವೇಜ್ ಅಲಿಯಾಸ್ ಮುಳ್ಳು, ಮೊಹಮ್ಮದ್ ಇರ್ಫಾನ್ ಅಲಿಯಾಸ್ ಮಿಯಾ, ನವಾಜ್ ಖಾನ್ ಅಲಿಯಾಸ್ ನವಾಜ್, ಇಮ್ರಾನ್ ಪಾಷಾ ಅಲಿಯಾಸ್ ಇಮ್ರಾನ್, ಉಮರ್ ಫಾರೂಕ್ ಅಲಿಯಾಸ್ ಉಮರ್, ಸಯ್ಯದ್ ದಸ್ತಗಿರ್ ಅಲಿಯಾಸ್ ಸಯ್ಯದ್ ರಶೀದ್ , ಖಾಸಿಫ್ ಅಹ್ಮದ್ ಅಲಿಯಾಸ್ ಖಾಸಿಫ್, ಅಹ್ಮದ್ ಸಲ್ಮಾನ್ ಅಲಿಯಾಸ್ ಮುಕ್ಕುಲ್ಲಾ, ಮುಸವೀರ್ ಪಾಷಾ ಅಲಿಯಾಸ್ ಒಡೆಯ, ಕಲಾಂದರ್ ಖಾನ್, ಸುಮೇರ್ ಪಾಷಾ, ಮೊಹಮ್ಮದ್ ಅಜೀಜ್, ಇನಾಯತ್ ಪಾಷಾ, ಮೊಹಮ್ಮದ್ ಖಲೀಂ ಅಲಿಯಾಸ್ ಕೈಫ್ ಬಂಧಿತರು.
ಇನ್ನು ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿದ್ದು, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಪ್ರತಿಭಟನೆಕಾರರನ್ನು ಮನವೊಲಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಕೈಬಿಟ್ಟಿದ್ದಾರೆ. ಆದ್ರೆ, ನಾಳೆ (ಸೆಪ್ಟೆಂಬರ್ 09) ಮದ್ದೂರು ಬಂದ್ ಕರೆ ಕೊಟ್ಟಿದ್ದು, ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚುವಂತೆ ವರ್ತಕರಿಗೆ ಮನವಿ ಮಾಡಿವೆ.
ಇನ್ನು ಹಿಂದೂ ಸಂಘಟನೆಗಳಿಗೆ ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸಹ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಬೂದಿ ಮುಚ್ಚಿದ ಕೆಂಡದಂತಿರುವ ಮದ್ದೂರು ಪಟ್ಟಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಗಣೇಶನನ್ನ ಕೂರಿಸಲಾಗಿತ್ತು. ನಿನ್ನೆ (ಸೆಪ್ಟೆಂಬರ್ 08) 11ನೇ ದಿನವಾಗಿದ್ದರಿಂದ ಸಂಜೆಯಿಂದ ಗಣೇಶ ವಿಸರ್ಜನಾ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಗಿತ್ತು. ಹೀಗೆ ಗಣೇಶ ವಿಸರ್ಜನಾ ಮೆರವಣಿಗೆ ಮುಂದೆ ಸಾಗಿ ಬರ್ತಿದ್ದಂತೆ ಮಸೀದಿ ಮುಂದೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆದಿದೆ. ಕಿಡಿಗೇಡಿಗಳು ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿ ನೀಚತನ ತೋರಿದ್ದಾರೆ. ಇದನ್ನ ಕಂಡ ಗಣೇಶ ಪ್ರತಿಷ್ಠಾಪಿಸಿದ ಯುವಕರು ಆಕ್ರೋಶಗೊಂಡಿದ್ದು, ಎರಡು ಗುಂಪಗಳ ನಡುವೆ ಗಲಾಟೆ ಜೋರಾಗಿದೆ. ಆ ವೇಳೆ ವಾತಾವರಣ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಎರಡು ಗುಂಪನ್ನು ತಕ್ಷಣವೇ ಚದುರಿಸಿ ಓಡಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.