ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಮಾಜಿ ಪಂಚಾಯತ್ ಅಧ್ಯಕ್ಷೆ ಗೀತಾ ಚೆನ್ನಪ್ಪ ಸೇರಿದಂತೆ 20 ಮಂದಿ ಬಿಜೆಪಿ ಕಾರ್ಯಕರ್ತರು ಶಾಸಕ ಅಶೋಕ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕರು ನೂತನವಾಗಿ ಪಕ್ಷ ಸೇರಿದವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ, ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮಾತನಾಡಿದ ಶಾಸಕ ಅಶೋಕ್ ರೈ, “ಆರ್ಯಾಪು ಪಂಚಾಯತ್ ವ್ಯಾಪ್ತಿಯಿಂದ ಬಿಜೆಪಿಯ ಮಾಜಿ ಪಂಚಾಯತ್ ಅಧ್ಯಕ್ಷರು ಸೇರಿದಂತೆ ಸುಮಾರು 18 ಜನರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಇವರು ಸ್ವಇಚ್ಛೆಯಿಂದ, ಯಾವುದೇ ಒತ್ತಡವಿಲ್ಲದೆ, ನಮ್ಮ ಕಾಂಗ್ರೆಸ್ ಪಕ್ಷದ ತತ್ವಗಳು ಮತ್ತು ನಮ್ಮ ಕಾರ್ಯವೈಖರಿಯನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ,” ಎಂದು ತಿಳಿಸಿದರು.
ಅವರು ಮುಂದುವರಿಸಿ, “ಇವರಲ್ಲಿ ಈ ಹಿಂದೆ ಬೇರೆ ಪಕ್ಷದಲ್ಲಿ ಜವಾಬ್ದಾರಿಯಲ್ಲಿದ್ದವರು, ಹಾಗೂ ಬೇರೆ ಪಕ್ಷದ ಮತದಾರರು ಸೇರಿದ್ದಾರೆ. ಅವರ ರಸ್ತೆಯ ಬೇಡಿಕೆ ಈಡೇರದಿರುವುದು ಮತ್ತು ಅವರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಸಿಗದಿದ್ದರಿಂದ ಅವರು ಕಾಂಗ್ರೆಸ್ ಪಕ್ಷವನ್ನು ಸೇರಲು ನಿರ್ಧರಿಸಿದ್ದಾರೆ,” ಎಂದು ಹೇಳಿದರು.