ಮಂಗಳೂರು:ಜನರ ತೆರಿಗೆ ಹಣದಿಂದ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿ, ಆದರೆ ಪರಿಸ್ಥಿತಿ ಜನರ ಜೀವಕ್ಕೆ ಅಪಾಯ. ಎಲ್ಲೆಡೆ ಗುಂಡಿಗಳು, ಹಾಳಾದ ರಸ್ತೆ, ಅಪಘಾತಗಳ ಸರಮಾಲೆ ಗುಣಮಟ್ಟವಿಲ್ಲದ ಕಾಮಗಾರಿ
ನಿರ್ಲಕ್ಷ್ಯದಿಂದ ಜನರ ಜೀವ ಹಾನಿ ಹೊಣೆಗಾರಿಕೆ ತೆಗೆದುಕೊಳ್ಳದ ಅಧಿಕಾರಿಗಳು ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಆಗಿದೆ ಮಂಗಳೂರಿನ ಎನ್.ಎಚ್. ಅಧಿಕಾರಿಗಳ ಕಥೆ. ದರೋಡೆ ಹಾಕಿದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ಮಂಗಳೂರು ನಗರದ ಕೂಳೂರಿನ ಭೀಕರ ಅಪಘಾತದ ಬಳಿಕ ರಸ್ತೆ ಗುಂಡಿಯ ದುರಸ್ತಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಮಂಗಳೂರು ನಗರದ ಕೂಳೂರಿನಲ್ಲಿ ರಸ್ತೆ ಗುಂಡಿಗೆ ದ್ವಿಚಕ್ರ ಚಾಲಕಿ ಬಿದ್ದು ಲಾರಿ ಹರಿದು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತ ಎನ್ಎಚ್ ಅಧಿಕಾರಿಗಳು ರಸ್ತೆ ಗುಂಡಿಯನ್ನು ಮುಚ್ಚಿ ತೇಪೆ ಹಚ್ಚುತ್ತಿದ್ದಾರೆ.
ಎನ್ಎಚ್ 66 ಸುರತ್ಕಲ್ನಿಂದ ಕೆಪಿಟಿವರೆಗೆ ಅಲ್ಲಲ್ಲಿ ಸಂಪೂರ್ಣ ಹೊಂಡಗುಂಡಿ ಬಿದ್ದಿದೆ. ಇತ್ತೀಚೆಗೆ ಜನರ ಆಕ್ರೋಶದಿಂದ ಕೂಳೂರು ಬ್ರಿಡ್ಜ್ ಬಳಿ ಹೆದ್ದಾರಿ ಪ್ರಾಧಿಕಾರ ಗುಂಡಿ ಮುಚ್ಚುವ ಕಾರ್ಯ ಮಾಡಿತ್ತು. ಬೇರೆ ಗುಂಡಿಗಳು ಮುಚ್ಚುವ ಗೋಜಿಗೆ ಹೋಗದ ಪರಿಣಾಮ ದ್ವಿಚಕ್ರ ಸವಾರರು ಈ ರಸ್ತೆಯಲ್ಲಿ ಹರಸಾಹಸಪಟ್ಟು ಸಂಚಾರ ನಡೆಸುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನ ರಸ್ತೆಗಳ ಗುಂಡಿಗಳನ್ನು ಮುಚ್ಚಿ ನಿರ್ವಹಣೆ ಮಾಡಬೇಕಿದ್ದ ಎನ್.ಎಚ್. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ಮಳೆಗಾಲದಲ್ಲಿ ದೊಡ್ಡದೊಡ್ಡ ಹೊಂಡಗಳು ಸೃಷ್ಟಿಯಾಗುತ್ತಿದೆ.