ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ನೀರ್ಪಾಡಿ ಹಾಗೂ ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ.21ರಂದು ಎಪಿಎಂಸಿ ರಸ್ತೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯ ಬಳಿಯ ವಿದ್ಯಾಮಾತಾ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಜಿಲ್ಲೆಯಲ್ಲಿ ಅಶೋಕ್ ಕುಮಾರ್ ರೈಯವರು ಬಲಿಷ್ಠ ಶಾಸಕರಾಗಿದ್ದಾರೆ. ಅವರು ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರ ಜೊತೆಗೆ ಉತ್ತಮ ಬಾಂಧವ್ಯದಿಂದಿರುವುದಲ್ಲದೇ ಯಾವುದೇ ಬೇಡಿಕೆಗಳನ್ನು ತಕ್ಷಣ ಮಂಜೂರು ಮಾಡುವಂತೆ ಮುಖ್ಯಮಂತ್ರಿ, ಸಚಿವರಿಗೆ ಒತ್ತಡ ಹಾಕುತ್ತಿದ್ದಾರೆ. ನಾನು ಅಶೋಕ್ ರೈಯವರ ಜೊತೆಗೆ ಹೋಗಿದ್ದು ಈ ಭಾಗಕ್ಕೆ 20ಕೋಟಿ ಅನುದಾನ ಮಂಜೂರಾಗಿದೆ. ಕೆಲವೇ ದಿನಗಳಲ್ಲಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಲಿದೆ. ಅಲ್ಲದೆ ಅಶೋಕ್ ರೈಯವರು ಮುಖ್ಯಮಂತ್ರಿಯವರ ಜೊತೆಗೆ ಫೈಟ್ ಮಾಡಿ ಹೆಚ್ಚುವರಿ ರೂ.50ಕೋಟಿ ಅನುದಾನ ಪಡೆದುಕೊಂಡಿದ್ದಾರೆ. ಪಕ್ಷದ ಎಲ್ಲಾ ಘಟಕಗಳು ಶಾಸಕರ ಬೆನ್ನೆಲುಬಾಗಿ ಕೆಲಸಮಾಡಿ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡುವುದಲ್ಲದೆ ಸಚಿವರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಯುವ ಕಾಂಗ್ರೆಸ್‌ನವರು ಒಂದು ಬ್ಲಾಕ್‌ನಲ್ಲಿ 10 ಯುವಕ ತಂಡ ಮಾಡಿ ನಿಮ್ಮ ಸಾಧನೆ ತೋರಿಸಬೇಕು. ಮೈಕ್ ಮುಖ್ಯವಲ್ಲ. ತಲಮಟ್ಟದಲ್ಲಿ ಎಷ್ಟು ಕೆಲಸವಾಗಿದೆ ಎನ್ನುವುದು ಮುಖ್ಯ. ಶಾಲು ಎಷ್ಟು ಬೇಕಾದರೂ ಹಾಕಬಹುದು. ಶಾಲು ಹಾಕಿದನ್ನು, ನಾವು ಹೇಳಿದನ್ನು ಅನುಷ್ಠಾನ ಮಾಡಿದಾಗ ಅದಕ್ಕೆ ಬೆಲೆ. ಬರೀ ಶಾಲಿಗೆ ಬೆಲೆಯಿಲ್ಲ. ರೂ.150ಕೋಟಿ ಅನುದಾನದಲ್ಲಿ 1 ಸಾವಿರ ಕಾಮಗಾರಿಗಳು ನಡೆಯಲಿದೆ. ಮಹಿಳೆಯರು ಹಾಗೂ ಯುವಕರಿಗೂ ಅನುದಾನದಲ್ಲಿ ಪ್ರಾಧಾನ್ಯತೆ ನೀಡಲಾಗುವುದು. ಪಕ್ಷ ಸಂಘಟನೆಗೆ ನನ್ನಿಂದಾಗುವ ಸಹಕಾರ ನೀಡಲಾಗುವುದು. ಗೃಹಲಕ್ಷ್ಮೀ ಸೇರಿದಂತೆ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಮುಂದೆ ಹಲವು ಚುನಾವಣೆಗಳು ಬರಲಿದ್ದು, ಈಗಲೇ ಸಿದ್ದರಾಗಬೇಕು. ಬಿಜೆಪಿಯವರ ಹೇಗಾದರೂ ಮಂಗಮಾಡುತ್ತಾರೆ. ಒಂದು ದಿನಕ್ಕೆ ಐದು ಮತ ಕಾಂಗ್ರೆಸ್‌ಗೆ ತರುವ ಕೆಲಸವಾಗಬೇಕು. ಇದು ನಾನು ಒಬ್ಬನಿಂದ ಸಾಧ್ಯವಿಲ್ಲ. ಎಲ್ಲರಿಗೂ ಜವಾಬ್ದಾರಿ ನೀಡಿದ್ದು, ಉತ್ತಮ ರೀತಿಯಲ್ಲಿ ಸಂಘಟಿಸಬೇಕು. ಎಲ್ಲಾ ಶಕ್ತಿ ಮಹಿಳೆಯರಲ್ಲಿದ್ದು ಪಕ್ಷ ಸಂಘಟನೆಗೆ ಮಹಿಳಾ ಕಾಂಗ್ರೆಸ್‌ನ್ನು ಬಳಸಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಬ್ಲಾಕ್ ಕಾಂಗ್ರೆಸ್‌ಗೆ ತಾನು ಅಧ್ಯಕ್ಷನಾದ ಬಳಿಕ ಎಲ್ಲಾ ಘಟಕಗಳ ಪುನರ್‌ರಚನೆ ಮಾಡಲಾಗಿದೆ. ಪಕ್ಷ ಸಂಘಟನೆಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಪಕ್ಷದ ಕಾರ್ಯಕ್ರಮ ಹಾಗೂ ಶಾಸಕರ ಕಾರ್ಯಕ್ರಮಗಳಲ್ಲಿ ಮಹಿಳಾ ಕಾಂಗ್ರೆಸ್ ಸೇರಿಕೊಂಡಿದೆ. ಎಲ್ಲಾ ಘಟಕಗಳಿಗೂ ಬ್ಲಾಕ್ ಕಾಂಗ್ರೆಸ್ ಮೂಲವಾಗಿದೆ. ಎಲ್ಲಾ ಘಟಕಗಳಲ್ಲಿ ಬಹುತೇಕ ಹೊಸ ಮುಖಗಳಿವೆ. ಪಕ್ಷ ಸಂಘಟನೆಗೆ ಶಕ್ತಿ ಮೀರಿ ಪ್ರಯತ್ನಿಸಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರುವಂತೆ ಮಾಡಬೇಕು. ಟೀಕೆಗಳನ್ನು ಎದುರಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ನಗರ ಅಧ್ಯಕ್ಷೆ ಅಪ್ಪಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಮಹಿಳೆಯರಿಗೆ ಶೇ.50ರ ಮೀಸಲಾತಿ ತಂದಿದ್ದಾರೆ. ಅಲ್ಲಿದೆ ಪ್ರತಿ ಮನೆಗಳಲ್ಲಿಯೂ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿದ್ದು, ಅಂತಹವರನ್ನು ತಂದು ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಋಣಿಯಾಗಬೇಕು. ಗ್ಯಾರಂಟಿ ಯೋಜನೆಯಿಂದಾಗಿ ಮಹಿಳೆಯರು ಸಬಲೆಯರಾಗಿದ್ದಾರೆ. ಮಹಿಳಾ ಸಂಘಟನೆ ಬಲಿಷ್ಠಗೊಳಿಸಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಮಹಿಳಾ ಸಮಾವೇಶ ಆಯೋಜಿಸಬೇಕು ಎಂದರು.
ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಗ್ರಾಮೀಣ ಅಧ್ಯಕ್ಷೆ ಉಷಾ ಅಂಚನ್ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಕೈ ಹಿಡಿದು ಮುನ್ನಡೆಸುವವರು ಬೇಕಾಗಿದ್ದ ಅದಕ್ಕೆ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ. ಪ್ರತಿ ಮನೆಯ ಮಹಿಳೆಯರು ಮುಂದೆ ಬರಲುಪಂಚ ಗ್ಯಾರಂಟಿ ಸಹಕಾರಿಯಾಗಿದೆ. ಮಹಿಳಾ ಕಾಂಗ್ರೆಸ್‌ನ ಸಂಘಟನೆ ಬಲಿಷ್ಠಗೊಳಿಸಲು ಎಲ್ಲರ ಮಾರ್ಗದರ್ಶನ ಆವಶ್ಯಕ. ಸದಸ್ಯರು ಸಕಾಲಕ್ಕೆ ಸಹಕಾರ ನೀಡಿ ಸಂಘಟನೆ ಬಲೀಷ್ಠಗೊಳಿಸಬೇಕು ಎಂದು ಅವರು ನ.19ರಂದು ಮಂಗಳೂರಿನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಾವೇಶ ನಡೆಯಲಿದೆ ಎಂದರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಮನೆಯ ಜವಾಬ್ದಾರಿಯನ್ನು ನಿಭಾಯಿಸಿರುವ ಅನುಭವವಿರುವ ಮಹಿಳೆಯರಿಗೆ ಸಮಾಜದಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯವಿದೆ. ಪಕ್ಷದ ಜವಾಬ್ದಾರಿ ನೀಡಿದರು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ. ಮಹಿಳೆಯರು ಪಕ್ಷದ ಎಲ್ಲಾ ಸಭೆಗಳಲ್ಲಿಯೂ ಬಾಗವಹಿಸಬೇಕು. ಪ್ರತಿ ಬೂತ್‌ನಲ್ಲಿ 10 ಜನರ ತಂಡ ರಚಿಸಿಕೊಂಡು ಬೂತ್ ಮಟ್ಟದಲ್ಲಿ ಮಹಿಳಾ ಕಾಂಗ್ರೆಸ್ ಬಲಿಷ್ಠಗೊಳಿಸಬೇಕು. ಕುಟುಂಬದ ಜವಾಬ್ದಾರಿಯ ಜೊತೆಗೆ ಪಕ್ಷ ಸಂಘಟನೆಯಲ್ಲಿಯೂ ಮಹಿಳೆಯರು ತೊಡಗಿಸಿಕೊಳ್ಳಬೇಕು ಎಂದರು.
ಪದಪ್ರದಾನ ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿ ಪಂಚ ಗ್ಯಾರಂಟಿ ಸಹಿತ ಹಲವು ಯೋಜನೆಗಳನ್ನು ನೀಡಿದೆ. ಅದನ್ನು ಪ್ರತಿ ಮನೆಗಳಿಗೂ ತಲುಪಿಸುವ ಮೂಲಕ ಪಕ್ಷಕ್ಕೆ ವಿಧೇಯರಾಗಬೇಕು. ಅದು ಮಾತಿಗೆ ಸೀಮಿತವಾಗಿರದೇ ಕೃತಿಯಲ್ಲಿರಬೇಕು. ಅದಕ್ಕಾಗಿ ಮಹಿಳಾ ಕಾಂಗ್ರೆಸ್ ಬಹುಮುಖ್ಯವಾಗಿದೆ. ಶಾಸಕ ಅಶೋಕ್ ಕುಮಾರ್ ರೈಯವರ ಅಭಿವೃದ್ಧಿ ಕಾರ್ಯಗಳನ್ನು ಊಹಿಸಲು ಸಾಧ್ಯವಿಲ್ಲ. ಮೆಡಿಕಲ್ ಕಾಲೇಜಿನಂತ ಬೆಂಚ್‌ಮಾರ್ಕ್‌ನ ಕೀರ್ತಿ ಅಶೋಕ್ ರೈಯವರಿಗೆ ಸಲ್ಲುತ್ತದೆ. ಇಂತಹ ಶಾಸಕರನ್ನು ಎಲ್ಲಯೂ ಸಿಗಲು ಸಾಧ್ಯವಿಲ್ಲ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿಯವರು ಅನಾರೋಗ್ಯದಲ್ಲಿದ್ದು ಅವರು ಬರುವ ತನಕ ಅವರ ಜವಾಬ್ದಾರಿ ನಾನು ನಿರ್ವಹಿಸಲಿದ್ದೇನೆ. ಅವರಿಗೆ ನೀಡುತ್ತಿದ್ದ ಸಹಕಾರವನ್ನು ನನಗೂ ನೀಡಬೇಕು. ಪುತ್ತೂರಿನಲ್ಲಿ ಸಾಧನೆಯ ಮುನ್ನುಡಿ ಬರೆದು ಮಹಿಳಾ ಕಾಂಗ್ರೆಸ್‌ನ್ನು ಮುಗಿಲೆತ್ತರೆಕ್ಕೆ ಕೊಂಡೊಯ್ಯುವ ಇರಾದೆಯಿದ್ದು ಅದಕ್ಕೆ ಎಲ್ಲರೂ ಸಹಕರಿಸಬೇಕು. ಮಹಿಳಾ ಸಂಘಟನೆಗಾಗಿ ರೋಟರಿ, ಜೇಸಿ ಯಂತೆ ಮಹಿಳಾ ಘಟಕಗಳನ್ನು ಪ್ರಾರಂಭಿಸಲಾಗುವುದು. ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ಅಧ್ಯಕ್ಷರ ಜೊತೆಗೆ 25 ಮಂದಿ ಸದಸ್ಯರ ತಂಡ ರಚಿಸಲಾಗುವುದು. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಹಿಳೆಯರು ಬದಲಾವಣೆಯ ನಾಯಕರಾಗಬೇಕು.
ಹಜ್ಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರಾದ ಉಷಾ ಅಂಚನ್, ಅಪ್ಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ನಮಿತಾ ರಾವ್‌ರವರನ್ನು ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾಸಿ, ಗೌರವಿಸಿದರು. ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಪ್ರಭಾ ಗೌಡ ಹಾಗೂ ನಿಕಟಪೂರ್ವ ಅಧ್ಯಕ್ಷೆ ಶಾರದಾ ಅರಸ್‌ರವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನಿಸಿದರು.
ಮಹಿಳಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷೆ ಶಾರದಾ ಅರಸ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ಮುಕ್ವೆ ಮತ್ತು ತಂಡ ಪ್ರಾರ್ಥಿಸಿದರು. ನೆಬಿಸಾ, ಬದ್ರುನ್ನೀಸಾ, ಚಂದ್ರಿಕಾ, ಕಾವ್ಯ, ರೇವತಿ, ಹರಿಣಾಕ್ಷಿ ನರಿಮೊಗರು, ಧರಣಿ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಎನ್.ವಿ ಡ್ಯಾನ್ಸ್ ಸ್ಟುಡಿಯೋ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಬದಿನಾರು, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹ್ಮಮದ್ ಬಡಗನ್ನೂರು, ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ, ಜಿಲ್ಲಾ ಕಾಂಗ್ರೆಸ್‌ನ ಮುರಳೀಧರ ರೈ ಮಠಂತಬೆಟ್ಟು, ಶ್ಯಾಮ ಸುಂದರ ರೈ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಶರೂನ್ ಸಿಕ್ವೇರಾ ಸಹಿತ ಹಲವು ಮಂದಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಸಭೆಯಲ್ಲಿ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಕರ್ನಾಟಕ ರಾಜ್ಯ ಸರಕಾರದ ಸಚಿವರಾದ ರಹೀಮ್ ಖಾನ್ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ. ಮತ್ತು ಪಕ್ಷದ ಪದಾಧಿಕಾರಿಗಳು ಹಿರಿಯ ಕಾಂಗ್ರೆಸ್ ಮುಖಂಡರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದರು.