ಬೆಳ್ತಂಗಡಿ:ಧರ್ಮಸ್ಥಳದಲ್ಲಿ ನೂರಾರು ಶವ ಹೂತ್ತಿರುವುದಾಗಿ ಚಿನ್ನಯ್ಯ ಆರೋಪ ಮಾಡಿರುವ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಲಾಗಿದೆ.
ಜಿಲ್ಲೆಯ ವಿವಿಧೆಡೆ ಪೊಲೀಸ್ ಠಾಣೆಯಲ್ಲಿ ಸುಮಾರು 32ಕ್ಕೂ ಅಧಿಕ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.
ಪುತ್ತೂರು ಸಹಾಯಕ ಆಯುಕ್ತರಾದ (ಎಸಿ) ಸ್ಟೆಲ್ಲಾ ವರ್ಗಿಸ್ ಗೆ ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದನ್ನು ಪರಿಶೀಲನೆ ನಡೆಸಿ ವರದಿಯ ಆಧಾರದಲ್ಲಿ ಸೆ.18 ರಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷಗಳ ಅವಧಿಗೆ ಮಾಡಿ ಆದೇಶ ಮಾಡಲಾಗಿದೆ.
ಸಪ್ಟೆಂಬರ್ 20ರಂದೇ ಪುತ್ತೂರು ಸಹಾಯಕ ಆಯುಕ್ತರು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಆದ್ರೆ, ಇನ್ನೂ ಕೂಡ ಗಡಿಪಾರು ಪ್ರಕ್ರಿಯೆ ನಡೆದಿಲ್ಲ. ಯಾಕಂದ್ರೆ ಗಡಿಪಾರು ನೋಟಿಸ್ ಅನ್ನು ಪೊಲೀಸರು ಖುದ್ದು ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನೀಡಬೇಕು. ಅದಾದ ಬಳಿಕ ಗಡಿಪಾರು ಪ್ರಕ್ರಿಯೆ ನಡೆಯುತ್ತದೆ.
ಹಲವು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರು ಹಲವು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸೌಜನ್ಯ ಪರ ಹೋರಾಟದಲ್ಲೂ ಸಹ ಇವರು ಮುಂಚೂಣಿಯಲ್ಲಿದ್ದರು. ಅಲ್ಲದೇ ಧರ್ಮಸ್ಥಳ ಪ್ರಕರಣದಲ್ಲೂ ಸಹ ಕಾಣಿಸಿಕೊಂಡಿದ್ದು, ಈ ಸಂಬಂಧ ಇವರ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧವೂ ಸಹ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದರು. ಸದ್ಯ ಇವರ ವಿರುದ್ಧ ಸುಮಾರು 32 ಪ್ರಕರಣ ಇದ್ದು, ವಿಚಾರಣೆ ಹಂತದಲ್ಲಿವೆ.