ಪುತ್ತೂರು: ಸ್ವಚ್ಚತೆ ಮಾಡುವವರಿದ್ದಾರೆ ಎಂದು ಸಾರ್ವಜನಿಕರು ಸುಮ್ಮನಿರುವುದಲ್ಲ. ನಗರವನ್ನು ಸ್ವಚ್ಚವಾಗಿಡುವಲ್ಲಿ ನಾಗರೀಕರ ಪಾತ್ರವೂ ಮಹತ್ವವಾಗಿದೆ. ನಾಗರೀಕರ ಕರ್ತವ್ಯವೂ ಇದೆ. ಮನೆಯ ಕಸವನ್ನು ರಸ್ತೆ ಬದಿ ಎಸೆಯುವುದಲ್ಲ. ಇದಕ್ಕಾಗಿ ನಾಗರೀಕರಿಗೂ ಕೌನ್ಸಿಲಿಂಗ್‌ನ ಆವಶ್ಯಕತೆಯಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಸ್ವಚ್ಚತೆಯ ಬಗ್ಗೆ ಸಾರ್ವಜನಿಕರೂ ಮಾಹಿತಿ ಪಡೆದುಕೊಳ್ಳಬೇಕಾದ ಆವಶ್ಯಕತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರಿನ ಪುರಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಸಿ ಮಾತನಾಡಿದರು. ಪ್ರತಿದಿನ ಬೆಳಿಗ್ಗೆ ೫ ಗಂಟೆಗೆ ಎದ್ದು ಸ್ವಚ್ಚತೆ ಮಾಡುವವರು ಪೌರಕಾರ್ಮಿಕರು. ಅವರಿಗೆ ನಮನ ಕೊಡುವವರು ಕಡಿಮೆ. ಪೌರ ಕಾರ್ಮಿಕರನ್ನು ಕೀಳು ನೋಭಾವನೆಯಲ್ಲಿ ಕಾಣಬಾರದು. ಅವರಿಗೆ ಸಮಾಜದಲ್ಲಿ ಗೌರವ ಕೊಡುವ ಕೆಲಸವಾಗಬೇಕು. ಅವರು ಮಾಡುವ ಕೆಲಸ ದೇವರ ಕೆಲಸವಾಗಿದ್ದು ಸಮಾಜಕ್ಕೆ ಅರ್ಪಣೆ ಮಾಡುವ ಕೆಲಸವಾಗಬೇಕು. ಪೌರ ಕಾರ್ಮಿಕರ ಸೇವೆಗೆ ಸರಕಾರವು ಮಹತ್ವ ನೀಡುತ್ತದೆ. ಯಾರೂ ಮಾಹಿತಿಯ ಕೊರತೆಯಿಂದ ತ್ಯಾಜ್ಯವನ್ನು ಎಸೆಯುವುದಿಲ್ಲ. ಪ್ರತಿಯೊಬ್ಬ ನಾಗರೀಕರ ಮನಸ್ತತಿ ಬದಲಾಗಬೇಕಾದ ಆವಶ್ಯಕತೆಯಿದೆ ಎಂದು ಹೇಳಿದ ಶಾಸಕರು ಪುತ್ತೂರಿನಲ್ಲಿಯೂ ನಗರ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಡ್ರೈನೇಜ್ ಸಿಸ್ಟಮ್ ಬಂದಿಲ್ಲ. ನಗರದ ಅಭಿವೃದ್ಧಿಗೆ ಪೂರಕವಾಗಿ ಡ್ರೈನೇಜ್ ಸಿಸ್ಟಮ್‌ಗೂ ಮಹತ್ವ ನೀಡಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸತೀಶ್ ಭಟ್ ಮಾತನಾಡಿ, ಪ್ರತಿಯೊಬ್ಬರಿಗೂ ನಮ್ಮ ದೇಶ ಸಿಂಗಾಪುರ, ಜಪಾನ್, ಜರ್ಮನಿ ಆಗಬೇಕು ಎಂಬ ಆಕಾಂಕ್ಷೆಗಳಿರುತ್ತದೆ. ಆದರೆ ಜನತೆ ಅದಕ್ಕೆ ಸ್ಪಂಧಿಸುತ್ತಾರಾ ಎಂಬ ಪ್ರಶ್ನೆಯಿದೆ. ಸ್ವಚ್ಚತೆ ಕಾಪಾಡುವಲ್ಲಿ ನಾಗರಿಕರ ಜವಾಬ್ದಾರಿ ಮಹತ್ತರವಾಗಿದ್ದು ಸರಕಾರ ಇಲಾಖೆಗಳ ಮೂಲಕ ಜನತೆಗೆ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಸ್ವಚ್ಚತೆ ಇರುವಲ್ಲಿ ಆರೋಗ್ಯವಿದೆ ಎಂದ ಅವರು ಸ್ವಚ್ಚ ಪುತ್ತೂರು ನಿರ್ಮಾಣದಲ್ಲಿ ಪೌರ ಕಾರ್ಮಿಕರ ಬಹುದೊಡ್ಡ ಕೊಡುಗೆಯಿದೆ ಎಂದರು.
ಪೌರ ಕಾರ್ಮಿಕರಾದ ಉಮಾವತಿ, ವೀರಪ್ಪ, ಬಪ್ಪಯ್ಯ ಯಾನೆ ಕೃಷ್ಣಪ್ಪ, ಚಂದ್ರಶೇಖರ, ಚಿದಾನಂದ, ದಸ್ತಗಿರಿ, ಶಿವಕುಮಾರ್, ಯಶೋಧ, ಸೀತಾ ಹಾಗೂ ಪ್ರವೀಣ ಇವರನ್ನು ಸನ್ಮಾನಿಸಲಾಯಿತು. ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಪರಿಸರ ಅಭಿಯಂತ ಶಬರೀನಾಥ್ ರೈ, ಲೆಕ್ಕ ಅಧೀಕ್ಷಕ ರಾಮಚಂದ್ರ ಸಾಗರ್, ೩೫ ಮಂದಿ ಪೌರ ಕಾರ್ಮಿಕರು, ಹತ್ತು ಮಂದಿ ಚಾಲಕರು ಹಾಗೂ ಮೂರು ಮಂದಿ ಮೇಲ್ವಿಚಾರಕರ ಹಾಗೂ ಸಾಹಸ್ ಸಂಸ್ಥೆಯ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಪೌರಕಾರ್ಮಿಕರಿಗೆ ಗೌರವದ ಜೊತೆಗೆ ತಲಾ ರೂ.೭೦೦೦ಮೊತ್ತವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಭಟ್‌ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ:
ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಪೌರಕಾರ್ಮಿಕರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ನಗರ ಸಭೆಯ ಸ್ವಚ್ಚತಾ ವಾಹಿನಿ ಚಾಲಕ ಕೂಸಪ್ಪರವರ ಪುತ್ರಿ ದಿಶಾ ಹಾಗೂ ಪೌರಕಾರ್ಮಿಕ ಲೋಕಯ್ಯ ನಾಯ್ಕರ ಪುತ್ರ ಶ್ರೀಕಾಂತ್ ಲಂಬಾನಿಯವರಿಗೆ ನೀಡಿ ಗೌರವಿಸಲಾಯಿತು.
ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಗರ ಸಭಾ ಸದಸ್ಯರ, ಸಿಬಂದಿಗಳು, ಪೌರಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಪೌರಕಾರ್ಮಿಕರ ದೈನಂದಿನ ಕೆಲಸ ಕಾರ್ಯಗಳನ್ನು ಆದರಿತವಾಗಿ ನಗರ ಸಭೆಯು ಲೆಕ್ಕ ಅಧೀಕ್ಷಕ ರಾಮಚಂದ್ರ ಸಾಗರ್ ಅವರು ಎಐ ತಂತ್ರಜ್ಞಾನದಲ್ಲಿ ನಿರ್ಮಿಸಿದ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ, ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಹೊರಟ ಪೌರ ಕಾರ್ಮಿಕರ ಜಾಥಾವು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮುಖ್ಯರಸ್ತೆ ಮೂಲಕ ಶ್ರೀಧರ ಭಟ್ ಅಂಗಡಿ ಬಳಿಯಿಂದಾಗಿ ಕಿಲ್ಲೇ ಮೈದಾನದ ತನಕ ಸಾಗಿ ಬಂದಿದೆ. ಸಭಾ ಕಾರ್ಯಕ್ರಮದ ಬಳಿಕ ಭೋಜನ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ,ನಗರ ಸಭೆಯ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ,ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ,ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.