ಪುತ್ತೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ರಾಜ್ಯದ ಸರಕಾರಿ, ಅನುದಾನಿತ ಶಾಲೆಗಳಿಗೆ ಅ.18ರವರೆಗೆ ರಜೆ ಘೋಷಿಸಲಾಗಿದೆ.
ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಆಯೋಗವು ನಡೆಸುತ್ತಿರುವ ಸಮೀಕ್ಷೆ ಪ್ರಗತಿ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ಮಂಗಳವಾರ ಸಭೆ ನಡೆಸಿದರು.
ಕರ್ನಾಟಕದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಇಂದು ಕೊನೆ ದಿನವಾಗಿದೆ. ಆದ್ರೆ, ನಿರೀಕ್ಷೆಯಂತೆ ಸಮೀಕ್ಷೆ ಮುಗಿಯದ ಕಾರಣ ಜಾತಿಗಣತಿ ಅವಧಿಯನ್ನು ವಿಸ್ತರಿಸಲಾಗಿದೆ. ಶಿಕ್ಷಕರನ್ನು ಸಮೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಿಂದ ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲು ನಿರ್ಧರಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನಾಳೆಯಿಂದ ಅಕ್ಟೋಬರ್ 18ರವರೆಗೆ ದಸರಾ ರಜೆಯನ್ನು ಸರ್ಕಾರ ವಿಸ್ತರಣೆ ಮಾಡಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೆಲವು ಕಡೆ ಪೂರ್ಣಗೊಂಡಿಲ್ಲ. ಹೀಗಾಗಿ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಘೋಷಿಸಿದರು.