ಮಂಡ್ಯ: ಲೋಕಸಭೆ ಸಾರ್ವತ್ರಿಕ ಚುನಾವಣೆ ಸೋಲಿನ ಬಳಿಕ ಮಂಡ್ಯದಿಂದ ಅಂತರ ಕಾಯ್ದುಕೊಂಡಿದ್ದ ಚಿತ್ರನಟಿ, ಮಾಜಿ ಸಂಸದ ರಮ್ಯಾ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಮತದಾನದಿಂದ ದೂರ ಉಳಿದರು.
2014ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಮ್ಯಾ ದಿವ್ಯ ಸ್ಪಂದನ ಸೋತ ಬಳಿಕ ಮಂಡ್ಯದಲ್ಲಿ ಕಾಣಿಸಿಕೊಂಡಿಲ್ಲ. ವರ್ಷದ ಬಳಿಕ ಆಗೊಮ್ಮೆ ಈಗೊಮ್ಮೆಯಷ್ಟೇ ಮಂಡ್ಯ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಂತರ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾದ ಬಳಿಕ ಬಹುತೇಕ ಮಂಡ್ಯದಿಂದ ದೂರವೇ ಆಗಿದ್ದರು.
ಮಂಡ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೇ 2ರಂದು ನಡೆದ ಬಹಿರಂಗ ಪ್ರಚಾರ ಮತ್ತು ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ನಟಿ ರಮ್ಯಾ ವೇದಿಕೆ ಹಂಚಿಕೊಂಡು ಕಾಂಗ್ರೆಸ್‌ಗೆ ಮತ ನೀಡುವಂತೆ ಎರಡು ಸಾಲಿನ ಭಾಷಣ ಮಾಡಿ ಹೋಗಿದ್ದರು. ಆದರೆ ಈ ಬಾರಿ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರ ಪ್ರಚಾರಕ್ಕೂ ಬಂದಿಲ್ಲ. ಜತೆಗೆ ಮತದಾನದ ಕರ್ತವ್ಯ ನಿಭಾಯಿಸಲು ಸಹ ಅವರು ಮುಂದಾಗಿಲ್ಲ.
ಹಿಂದಿನ ಎರಡೂ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಅವರು ಮತಗಟ್ಟೆ ಸಮೀಪ ಸುಳಿದಿಲ್ಲ
2013ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ರಮ್ಯಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಆದರೆ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಎದುರು ಸೋಲು ಕಂಡಿದ್ದರು.