ಪುತ್ತೂರು: ಪಡ್ನೂರು ಗ್ರಾಮದ ಕಾರ್ಲ ಶ್ರೀರಾಮ ಭಜನಾ ಮಂದಿರದ ಬಳಿ ಶವ ಸಾಗಿಸುತ್ತಿದ್ದ ಅಂಬುಲೆನ್ಸ್‌ನ್ನು ತಡೆದು ಅವಾಚ್ಯ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ದಿನಾಂಕ 12-10-2025 ರ ರಾತ್ರಿ 12:30 ಗಂಟೆಯ ಸುಮಾರಿಗೆ KA 21 AE 3033 ನಂಬರಿನ ಅಂಬುಲೆನ್ಸ್ ಶವ ಸಾಗಿಸುತ್ತಿರುವ ವೇಳೆ, KA 19 AE 7322 ನಂಬರಿನ ಬೊಲೆರೋ ವಾಹನವು ಹಿಂಬದಿಯಿಂದ ಓವರ್‌ಟೇಕ್ ಮಾಡಿ ರಸ್ತೆಗೆ ಅಡ್ಡಗಟ್ಟಿ ಅಕ್ರಮವಾಗಿ ತಡೆದಿದೆ ಎಂದು ತಿಳಿದು ಬಂದಿದೆ.
ಅಂಬುಲೆನ್ಸ್‌ನಲ್ಲಿ ಮೃತಪಟ್ಟ ಬಾಲಕಿಯ ಶವವಿದ್ದು, ಮೃತರ ಕುಟುಂಬಸ್ಥರು ಗಾಯಗೊಂಡ ಪರಿಸ್ಥಿತಿಯಲ್ಲಿದ್ದರು. ಈ ಸಂದರ್ಭದಲ್ಲಿ ಆರೋಪಿತರು ಅಂಬುಲೆನ್ಸ್‌ನಲ್ಲಿದ್ದವರೊಂದಿಗೆ ಅವಾಚ್ಯ ಶಬ್ದ ಬಳಸಿ ನಿಂದನೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಿರಿಯಾದಿದಾರರಾದ ಪುತ್ತೂರು ತಾಲೂಕಿನ ಅವಿನಾಶ್ ಎಂ. (32) ಅವರು ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2025 ರಂತೆ ಕಲಂ 126(2), 352, 351(2) ಜೊತೆಗೆ 3(5) ಬಿಎನ್ಎಸ್ 2023 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.