ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಗೆ ತರಹೇವಾರಿ ಹಣ್ಣುಗಳು ಲಗ್ಗೆ ಇಡುತ್ತವೆ. ಅದರಲ್ಲಿ ಮುಖ್ಯ ಆಕರ್ಷಣೆಯೇ ‘ಮಾವು’. ಆದರೆ, ಈ ಸಲ ಬರಗಾಲದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಮಾವು ಇಳುವರಿ ಆಗಿಲ್ಲ. ಹೀಗಾಗಿ, ಇದರ ಬೆಲೆ ದುಪ್ಪಟ್ಟು ಇದೆ.
ಬೇರೆ ದೇಶ, ಉತ್ತರ ಭಾರತದಿಂದ ಆಮದು ಮಾಡಿಕೊಳ್ಳಲಾಗುವ ಸೇಬಿನ ದರ 200 ರೂ. ಆಸುಪಾಸಿನಲ್ಲೇ ಇರುತ್ತದೆ. ಆದರೆ, ಸರ್ವೆ ಸಾಮಾನ್ಯವಾಗಿ ನಮ್ಮ ಮನೆ ಅಕ್ಕಪಕ್ಕ, ಜಮೀನುಗಳಲ್ಲಿ ಬೆಳೆಯುವ ಮಾವಿಗೂ ಮಾರುಕಟ್ಟೆಯಲ್ಲಿ ಸೇಬಿನ ವರ್ಚಸ್ಸು ಬಂದಿದೆ.
ಮಾವಿನಕಾಯಿಯಿಂದ ಉಪ್ಪಿನಕಾಯಿ ತಯಾರಿಸುವ ಮಾರುಕಟ್ಟೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದಲೂ ಮಾವಿನ ಕಾಯಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸಲ ಇದರ ಮೇಲೆಯೂ ಪರಿಣಾಮ ಬೀರಲಿದೆ.
ಉಪ್ಪಿನಕಾಯಿಗೆ ನಾಟಿ ಪ್ರಭೇದದ ಮಾವನ್ನೇ ಪ್ರಧಾನವಾಗಿ ಬಳಸಲಾಗುತ್ತದೆ. ಈ ಸಲ ಇಳುವರಿ ಕಡಿಮೆ ಇರುವುದರಿಂದ ಕಾಯಿಯ ಬೆಲೆ ಶೇ.30-40 ಏರಿಕೆಯಾಗಿದೆ. ಇದು ಉಪ್ಪಿನಕಾಯಿ ದರದ ಮೇಲೆಯೂ ನೇರ ಪರಿಣಾಮ ಬೀರಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ.50ರಷ್ಟು ಬೆಲೆ ಏರಿಕೆಯಾಗಿದೆ.