ಪಾಟ್ನಾ, ಅಕ್ಟೋಬರ್ 31: ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಎನ್‌ಡಿಎ ಇಂದು ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದೆ. ಜೆಪಿ ನಡ್ಡಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಪ್ರಣಾಳಿಕೆಯಲ್ಲಿ ಏನಿದೆ ಎಂದು ನೋಡುವುದಾದರೆ ಸರ್ಕಾರಿ ನೌಕರರ ನೇಮಕ, ಉಚಿತ ವಿದ್ಯುತ್, ನಾಲ್ಕು ನಗರಗಳಿಗೆ ಮೆಟ್ರೋ ವಿಸ್ತರಣೆ ಸೇರಿ ಹಲವು ಭರವಸೆಗಳನ್ನು ಎನ್‌ಡಿಎ ನೀಡಿದೆ.
ಒಂದು ಕೋಟಿ ಸರ್ಕಾರಿ ನೌಕರರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆ ಜಾರಿಗೊಳಿಸಲಾಗುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ 2 ಲಕ್ಷದವರೆಗೆ ಸಹಾಯ ಮಾಡಲಾಗುತ್ತದೆ. ಅತಿ ಹಿಂದುಳಿದ ವರ್ಗದವರಿಗೆ 10 ಲಕ್ಷದವರೆಗೆ ಹಣ ಸಹಾಯ ಮಾಡಲಾಗುತ್ತದೆ. 1 ಕೋಟಿ ಮಹಿಳೆಯರನ್ನು ಲಖ್ಪತಿ ದೀದಿಯನ್ನಾಗಿ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ.
ಮಿಷನ್ ಕರೋಡಪತಿ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ ಸಹಾಯ ಮಾಡಲಾಗುತ್ತದೆ, ಬಿಹಾರದ 4 ಹೊಸ ನಗರಗಳಲ್ಲಿ ಮೆಟ್ರೋ ಸೇವೆ ಆರಂಭಿಸಲಾಗುವುದು, ಬಡ ಕುಟುಂಬಗಳಿಗೆ ‘ಪಂಚಾಮೃತ ಗ್ಯಾರಂಟಿ’ ಯೋಜನೆ ಜಾರಿ ಭರವಸೆ, ಬಿಹಾರದಲ್ಲಿ 7 ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸುವ ಭರವಸೆ, ಬಡ ಕುಟುಂಬಕ್ಕೆ 125 ಯೂನಿಟ್ ಉಚಿತ ವಿದ್ಯುತ್ ಭರವಸೆ, 3600 ಕಿ.ಮೀ. ರೈಲ್ವೆ ಮಾರ್ಗ ಆಧುನೀಕರಣಗೊಳಿಸುತ್ತೇವೆ ಎನ್ನುವ ಭರವಸೆಯನ್ನು ಜನರಿಗೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ತೀವ್ರಗೊಂಡಿದೆ. ಗುರುವಾರ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಚುನಾವಣೆ ನಡೆಯಲಿರುವ ರಾಜ್ಯದ ವಿವಿಧ ಭಾಗಗಳಲ್ಲಿ ರ್ಯಾಲಿಗಳನ್ನು ನಡೆಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್, ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಸೇರಿದಂತೆ ಎನ್‌ಡಿಎ ನಾಯಕರು ಉಪಸ್ಥಿತರಿದ್ದರು. ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ನಮೋ ರ‍್ಯಾಪಿಡ್ ರೈಲು ಸೇವೆಗಳನ್ನು ವಿಸ್ತರಿಸಲಾಗುವುದು. 10 ಹೊಸ ನಗರಗಳಿಂದ ದೇಶೀಯ ವಿಮಾನಗಳ ಹಾರಾಟ ಆರಂಭವಾಗಲಿದೆ.
ಪ್ರತಿ ಜಿಲ್ಲೆಯಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕಗಳು ಮತ್ತು 10 ಹೊಸ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು.ಉಚಿತ ಪಡಿತರ, 125 ಯೂನಿಟ್ ಉಚಿತ ವಿದ್ಯುತ್, 5 ಲಕ್ಷದವರೆಗೆ ಉಚಿತ ಚಿಕಿತ್ಸೆ, 50 ಲಕ್ಷ ಹೊಸ ಪಕ್ಕಾ ಮನೆಗಳು, ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುವುದು.ಬಡ ಕುಟುಂಬಗಳ ಎಲ್ಲಾ ವಿದ್ಯಾರ್ಥಿಗಳಿಗೆ ಕೆಜಿಯಿಂದ ಪಿಜಿವರೆಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗುವುದು.
ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆಗೆ ಪೌಷ್ಟಿಕ ಉಪಹಾರ ಮತ್ತು ಆಧುನಿಕ ಕೌಶಲ್ಯ ಪ್ರಯೋಗಾಲಯಗಳನ್ನು ಒದಗಿಸಲಾಗುವುದು.ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಎಲ್ಲಾ ಎಸ್‌ಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 2000 ರೂ. ನೀಡಲಾಗುವುದು.
ಆಟೋ-ಟ್ಯಾಕ್ಸಿ-ಇ-ರಿಕ್ಷಾ ಚಾಲಕರಿಗೆ 4 ಲಕ್ಷ ರೂಪಾಯಿಗಳ ಜೀವ ವಿಮೆ ನೀಡಲಾಗುವುದು. ಐದು ವರ್ಷಗಳಲ್ಲಿ ಬಿಹಾರ ಪ್ರವಾಹ ಮುಕ್ತವಾಗಲಿದೆ ಎಂಬುದನ್ನು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ.



 
                                









 
			










