ತಮಿಳುನಾಡಿನಲ್ಲಿ ದ್ರಾವಿಡ ಪಾರ್ಟಿಗಳ ಜಿದ್ದಾಜಿದ್ದಿನ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳು ನೆಲೆ ಕಂಡುಕೊಳ್ಳಲು ಇನ್ನೂ ವಿಫಲವಾಗುತ್ತಿವೆ, ಇದು ತಮಿಳುನಾಡಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ರಾಜಕೀಯ. ನ್ಯಾಷನಲ್ ಪಾರ್ಟಿಗಳು, ಅಲ್ಲಿ ಸೀಟು ಗೆಲ್ಲಬೇಕು ಎಂದರೆ, ಅದಕ್ಕೆ ಪ್ರಾದೇಶಿಕ ಪಕ್ಷಗಳ ಬೆಂಬಲ ಬೇಕೇ ಬೇಕು. ಅದು ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ, ಅಷ್ಟರಮಟ್ಟಿಗೆ ಪ್ರಾದೇಶಿಕ ಪಾರ್ಟಿಗಳ ಹಿಡಿತದಲ್ಲಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ತಮಿಳುನಾಡು ಒಂದು.
ಡಿಎಂಕೆ ಒಕ್ಕೂಟದ ನೇತೃತ್ವವನ್ನು ದಿವಂಗತ ಮಾಜಿ ಸಿಎಂ ಎಂ.ಕರುಣಾನಿಧಿ ವಹಿಸಿಕೊಂಡಿದ್ದ ಸಮಯದಿಂದ ಹಿಡಿದು, ಇದುವರೆಗೂ ಆ ಪಾರ್ಟಿ, ಇಂಡಿಯಾ ಅಥವಾ ಯುಪಿಎ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡು ಬಂದಿದೆ. ಇನ್ನೊಂದು ಕಡೆ, ದಿವಂಗತ ಮಾಜಿ ಸಿಎಂ ಜೆ.ಜಯಲಲಿತಾ ಅವರ ಹಿಡಿತದಲ್ಲಿದ್ದ ಎಐಎಡಿಎಂಕೆ ಪಾರ್ಟಿಯ ನಿಯತ್ತು ಒಂದೇ ಪಾರ್ಟಿಯ ಮೇಲೆ ಇಲ್ಲದೇ ಇದ್ದದ್ದು ಇನ್ನೊಂದು ಕಡೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ಉರುಳಿಸಲು ದಿ. ಜಯಲಲಿತಾ ಹಿಂದೆ ಮುಂದೆ ನೋಡಿರಲಿಲ್ಲ, ಅದಾದ ನಂತರದ ಪಶ್ಚಾತ್ತಾಪದ ಮಾತು, ಆಮೇಲಿನ ಮಾತಾಗಿತ್ತು. ಬದಲಾದ ರಾಜಕೀಯದಲ್ಲಿ ಮತ್ತು ಜಯಲಲಿತಾ ಅವರ ನಿಧನದ ನಂತರ, ಒಂದು ರೀತಿಯಲ್ಲಿ ಪರೋಕ್ಷವಾಗಿ, ಎಐಎಡಿಎಂಕೆ ಪಾರ್ಟಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗುತ್ತಾ ಬರುತ್ತಿದೆ. ಇಂತಹ ಸಮಯದಲ್ಲಿ, ತಮಿಳುನಾಡಿನಲ್ಲಿ, ಬಿಜೆಪಿಯ ನೆಲೆಯನ್ನು ಭದ್ರಗೊಳಿಸುವ ಜವಾಬ್ದಾರಿ, ಜನಪ್ರಿಯ ಯುವ ನಾಯಕ ಕೆ.ಅಣ್ಣಾಮಲೈ ಅವರ ಹೆಗಲಿಗೆ ಬಿತ್ತು. ಆದರೆ, ಅಲ್ಲಿ ಆಗುತ್ತಿರುವುದೇನು?
ತಮಿಳುನಾಡಿನ ಕರೂರ್ ನಲ್ಲಿ ಜನಿಸಿದ ಅಣ್ಣಾಮಲೈ, 2019ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ಹಿರಿಯ ಸಹದ್ಯೋಗಿಯಾಗಿದ್ದ ಮಧುಕರ್ ಶೆಟ್ಟಿ ಅವರ ಅಕಾಲಿಕ ನಿಧನ, ನನ್ನನ್ನು ಬಹಳವಾಗಿ ಕಾಡುತ್ತಿದೆ. ಮಾನಸ ಸರೋವರದ ಭಾಗದಲ್ಲಿ ಸ್ವಲ್ಪ ದಿನ ಕಳೆಯುತ್ತೇನೆ. ಆಮೂಲಕ, ನನ್ನ ಜೀವನದ ಮುಂದಿನ ಆದ್ಯತೆ / ಜೀವನವನ್ನು ಮತ್ತೊಮ್ಮೆ ಅಧ್ಯಯನ ನಡೆಸಬೇಕಿದೆ ಎನ್ನುವ ಕಾರಣವನ್ನು ಅವರು ನೀಡಿದ್ದರು. ಆದರೆ, ಅಷ್ಟೊತ್ತಿಗೆ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿತ್ತು.
ನೆಲೆಯೇ ಇಲ್ಲದ ರಾಜ್ಯದ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ಬಿಜೆಪಿಯ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಣ್ಣಾಮಲೈ ಅವರಿಗೆ ನೀಡುತ್ತಾರೆ. ಬಿಜೆಪಿಯ ವೋಟ್ ಬ್ಯಾಂಕ್ ಅನ್ನು, ದ್ರಾವಿಡ ನೆಲದಲ್ಲಿ ಹೆಚ್ಚಿಸುವುದು ದೊಡ್ಡ ಟಾಸ್ಕ್ ಎನ್ನುವುದು ಗೊತ್ತಿದ್ದರೂ, ಅಣ್ಣಾಮಲೈ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಅಲ್ಲಿಂದ, ಅವರು ಪಾರ್ಟಿಗಾಗಿ ಸುರಿಸಿದ ಬೆವರು ಅಷ್ಟಿಷ್ಟಲ್ಲ ಎನ್ನುವುದನ್ನು ವಿರೋಧಿ ಡಿಎಂಕೆ ಬಣದ ನಾಯಕರೂ, ಆಫ್ ದಿ ರೆಕಾರ್ಡ್ ಹೊಗಳಿದ್ದುಂಟು. ಆದರೆ, ಎಲ್ಲೋ ಇದು ಇತ್ತೀಚಿನ ದಿನಗಳಲ್ಲಿ ಅವರ ಹುಮ್ಮಸ್ಸಿಗೆ ತಣ್ಣೀರು ಎರೆಚುವ ಕೆಲಸವು ವ್ಯವಸ್ಥಿತವಾಗಿ ನಡೆಯುತ್ತಿದೆ.
ತಮ್ಮ ಹುಟ್ಟೂರು ಕರೂರ್ ಜಿಲ್ಲೆಯ ಅರ್ವಾಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದ ಅಣ್ಣಾಮಲೈ (2021) ಸ್ಪರ್ಧಿಸಿದ್ದರು. ಡಿಎಂಕೆ ಭದ್ರಕೋಟೆಯಾಗಿದ್ದರೂ, ಅಣ್ಣಾಮಲೈ 68,553 ಮತಗಳನ್ನು ಪಡೆದಿದ್ದರು. ಇದಕ್ಕಿಂತ ಹಿಂದಿನ ಅಂದರೆ 2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ 59,843 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದರು. ಹಾಗಾಗಿ, ಕೇವಲ ಒಂದು ವರ್ಷದಲ್ಲಿ ಅಣ್ಣಾಮಲೈ ಪಡೆದುಕೊಂಡ ಹೆಸರು, ಅರಿತುಕೊಂಡ ತಮಿಳುನಾಡು ರಾಜಕೀಯದ ಬಗ್ಗೆ, ವಿಪಕ್ಷಗಳೂ ಶಹಬ್ಬಾಸ್ ಗಿರಿಯನ್ನು ಕೊಟ್ಟಿದ್ದವು. ಇನ್ನೊಂದು ಕಡೆ, ತಮ್ಮದೇ ಮೈತ್ರಿಕೂಟದ ಎಐಎಡಿಎಂಕೆ ನಾಯಕರಿಗೆ ತಲೆನೋವಾಗಲು ಅಣ್ಣಾಮಲೈ ಕಾರಣವಾದರು. ಇದಕ್ಕೆ ಕಾರಣ, ಅವರ ಜನಪ್ರಿಯತೆ.
ವಿಧಾನಸಭಾ ಚುನಾವಣೆಯಲ್ಲಿ ಸೋತರೂ, ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡ ಅಣ್ಣಾಮಲೈ, ಮತ್ತೆ ರಾಜ್ಯ ಸುತ್ತಲು ಆರಂಭಿಸಿದರು. ಇವರು ಎಷ್ಟರ ಮಟ್ಟಿಗೆ ತಮಿಳುನಾಡು ರಾಜಕೀಯದಲ್ಲಿ ಪ್ರಚಲಿತಕ್ಕೆ ಬಂದರು ಎಂದರೆ, ಎಐಎಡಿಎಂಕೆ ನಾಯಕರನ್ನೇ ಪಕ್ಕಕ್ಕೆ ಸರಿಸಿ ಮುನ್ನಲೆಗೆ ಬರಲಾರಂಭಿಸಿದರು. ಅದಕ್ಕೆ ಸರಿಯಾದ ಪ್ರೋತ್ಸಾಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸಿಕ್ಕಿತು. ಇದಕ್ಕಿಂತ ಹೆಚ್ಚಾಗಿ, ಪ್ರಧಾನಿ ನರೇಂದ್ರ ಮೋದಿಗೆ, ಅಣ್ಣಾಮಲೈ ಹತ್ತಿರವಾಗಲು ಆರಂಭಿಸಿದರು.
ಚುನಾವಣೆ ಮುಗಿದು, ಮತ್ತೆ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ – ಎಐಎಡಿಎಂಕೆ ಮೈತ್ರಿ ಸಂಬಂಧ ಮಾತುಕತೆ ಆರಂಭವಾಯಿತು. ಮೈತ್ರಿಗೆ ಎಡಪ್ಪಾಡಿ ಪಳನಿಸ್ವಾಮಿ ಒಪ್ಪಿಕೊಳ್ಳುವ ಮುನ್ನ, ಒಂದು ಕಂಡೀಷನ್ ಅನ್ನು ಹಾಕಿದರು. ಅದು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಣ್ಣಾಮಲೈ ಮುಂದುವರಿಯಬಾರದು ಅಂದು. ಇದಕ್ಕೆ ಅಮಿತ್ ಶಾ ಮತ್ತು ಮೋದಿ ಆರಂಭದಲ್ಲಿ ಒಪ್ಪಿಕೊಳ್ಳದಿದ್ದರೂ, ಮುಂದಿನ ವರ್ಷ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ಒಪ್ಪಿಕೊಳ್ಳಬೇಕಾಯಿತು. ಅಮಿತ್ ಶಾ, ಚೆನ್ನೈಗೆ ಬಂದು, ಮೈತ್ರಿಯನ್ನು ಘೋಷಿಸಿ ಹೋದರು.
ಪಾರ್ಟಿಯ ನಿರ್ಧಾರದಿಂದಾಗಿ, ಪಕ್ಷಕ್ಕಾಗಿ ತನು ಮನ ಧನವನ್ನು ಅರ್ಪಿಸಿದ್ದ ಅಣ್ಣಾಮಲೈ, ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದರು. ನೈನಾರ್ ನಾಗೇಂದ್ರನ್ ರಾಜ್ಯಾಧ್ಯಕ್ಷರಾದರು. ಆದರೆ, ಬಿಜೆಪಿ ವರಿಷ್ಠರ ಈ ನಿರ್ಧಾರ, ಪಾರ್ಟಿಯ ಕಾರ್ಯಕರ್ತರ ಮಟ್ಟದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು. ಅಂದಿನಿಂದ, ಎಐಎಡಿಎಂಕೆ ನಾಯಕರೂ, ಅಣ್ಣಾಮಲೈ ಅವರನ್ನು ಲೇವಡಿ ಮಾಡಲಾರಂಭಿಸಿದರು. ಈ ವಿದ್ಯಮಾನಗಳು, ಈಗಲೇ ಎರಡು ಪಾರ್ಟಿಗಳ ನಡುವೆ, ವೈಮನಸ್ಸಿಗೆ ಕಾರಣವಾಗುತ್ತಿದೆ. ಅಮಿತ್ ಶಾ ಅವರ ಸೂಚನೆಯ ಮೇರೆಗೆ ಸುಮ್ಮನಿದ್ದೇನೆ, ಇಲ್ಲದಿದರೆ ಇವರ ಬಾಯಿ ಮುಚ್ಚಿಸಲು ನನಗೆ ಎರಡು ನಿಮಿಷ ಸಾಕು ಎನ್ನುವ ಮಾತನ್ನು ಅಣ್ಣಾಮಲೈ ವಿಷಾದದಿಂದ ನುಡಿದಿದ್ದಾರೆ.
ಕಳೆದ ವಾರ, ಅಣ್ಣಾಮಲೈ ಆಡಿರುವ ಮಾತು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಮೌನ ಮುರಿದಿದ್ದಾರೆ. ಹೊಸ ಪಾರ್ಟಿ ಕಟ್ಟುವ ಸುದ್ದಿ ಊಹಾಪೋಹ ಎಂದಿದ್ದರೂ, ಯಾರನ್ನೂ ಒತ್ತಾಯಪೂರ್ವಕವಾಗಿ, ಹೆಗಲ ಮೇಲೆ ಗನ್ ಇಟ್ಟುಕೊಂಡು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಆ ಮೂಲಕ, ಬಿಜೆಪಿಯಿಂದ ಹೊರಬರಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆಯಾಗಿ, ಅಣ್ಣಾಮಲೈ ವಿಚಾರದಲ್ಲಿ, ಬಿಜೆಪಿಯ ವರಿಷ್ಠರ ನಿರ್ಧಾರ ಸರಿಯಲ್ಲ ಎನ್ನುವುದು ಅಲ್ಲಿ ಕೇಳಿ ಬರುತ್ತಿರುವ ಮಾತು.























