ಪುತ್ತೂರು: ಆರೋಪಿಗಳನ್ನು ರಕ್ಷಿಸಲು ಒಳಸಂಚು ರೂಪಿಸಿ, ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಆರೋಪದ ಹಿನ್ನಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 115/2025. ಕಲಂ 132, 109, 303(2) r/w 3(5) ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಕಲಂ 4,5,6,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಕಾಯ್ದೆ & ಸಂರಕ್ಷಣಾ ಕಾಯ್ದೆ 2020ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಖರೀದಿ ಮಾಡಿರುವ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪತ್ರಗಳು ವೈರಲ್ ಆಗುತ್ತಿದ್ದು, ಈ ದಾಖಲೆಗಳ ಬಗ್ಗೆ ವಿಚಾರಿಸಿದಾಗ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿರವರು ದೃಢೀಕರಿಸಿದಂತೆ, ಶುಕ್ರವಾರದಂದು ಮಾತ್ರ ಜಾನುವಾರು ಸಂತೆ ನಡೆಯುವುದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸದ್ರಿ ದಾಖಲೆಗಳು ತಿದ್ದಿ ಸುಳ್ಳು ಸೃಷ್ಟನೆ ಮಾಡಿ ಪ್ರಸಾರ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ಆರ್.ಟಿ.ಓ ಅಧಿಕಾರಿ ಮತ್ತು ಪಶು ವೈದ್ಯಾಧಿಕಾರಿಯವರಿಂದ ಮಾಹಿತಿ ಪಡೆದಾಗ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲು ಅನುಮತಿ ನೀಡಿರುವುದಿಲ್ಲವೆಂದು ನೀಡಿದ್ದು, ಸುಳ್ಳು ಸೃಷ್ಟನೆ ಮಾಡಿದ ಹಾಗೂ ನೈಜವಾಗಿರದ ದಾಖಲೆಗಳೆಂದು ತಿಳಿದಿದ್ದರು ಕೂಡಾ, ಆರೋಪಿಗಳನ್ನು ರಕ್ಷಿಸುವ ದುರುದ್ದೇಶದಿಂದ State office SDPI Karnataka ಎಂಬ ಹೆಸರಿನ “X ”ಖಾತೆಯ ಖಾತೆದಾರರು, Thejasnews.com ನ ಮಾಲಕ/ಸಂಪಾದಕ ಮತ್ತು ಸಾದತ್ ಬಜತ್ತೂರು ಹಾಗೂ ಇತರ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವ ಮೂಲಕ, ಸಾರ್ವಜನಿಕರು ಉದ್ವೇಗಗೊಂಡು ಅಪರಾಧ ನಡೆಸಲು ಸನ್ನಿವೇಶ ಸೃಷ್ಟಿಸಿರುತ್ತಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 123-2025, ಕಲಂ: 233,240,338,353(1)(b),192,61(2)(b),238(c),r/w3(5) ಭಾರತೀಯ ನ್ಯಾಯ ಸಂಹಿತೆ 2023ರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕೂಡಾ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಪೋಸ್ಟ್ ಪ್ರಸಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯುತವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಬೇಕಾಗಿ ಪೊಲೀಸ್ ಇಲಾಖೆ ಸೂಚಿಸಿದೆ.























