ನೆಲ್ಯಾಡಿ: ಉದ್ಯಮಿ, ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (30ವ) ಮೃತದೇಹ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ಕಿನಾರೆಯಲ್ಲಿ ಶುಕ್ರವಾರ (ನ.07) ಮುಂಜಾನೆ ಪತ್ತೆಯಾಗಿದೆ.
ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಆಳ್ವ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ನೆಲ್ಯಾಡಿಯ ಚರಣ್ ಬಾರ್ & ರೆಸ್ಟೋರೆಂಟ್ ಅನ್ನು ಲೀಜ್ ಗೆ ಪಡೆದು ಉದ್ಯಮ ನಡೆಸುತ್ತಿದ್ದರು. ಅಭಿಷೇಕ್ ನಾಪತ್ತೆ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾಹಿತಿ ಪ್ರಕಾರ, ಅಭಿಷೇಕ್ ಆಳ್ವ ನವೆಂಬರ್ 5ರ ರಾತ್ರಿ ಸುಮಾರು 10 ಗಂಟೆಗೆ ಮುಲ್ಕಿ ಬಪ್ಪನಾಡು ಬ್ರಿಡ್ಜ್ ಬಳಿ ತಮ್ಮ ಕಾರ್‌ನ್ನು ನಿಲ್ಲಿಸಿ ನಾಪತ್ತೆಯಾಗಿದ್ದರು. ಕಾರ್‌ನಲ್ಲಿ ಅವರ ವೈಯಕ್ತಿಕ ವಸ್ತುಗಳು ಕಂಡುಬಂದಿದ್ದರಿಂದ ಕುಟುಂಬಸ್ಥರು ಆತಂಕಗೊಂಡು ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆಗಿನಿಂದಲೇ ಪೊಲೀಸ್ ತಂಡ, ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ನದಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
ಆದರೆ ಈಗ ಬಪ್ಪನಾಡು ಸಮೀಪದ ಶಾಂಭವಿ ನದಿ ತೀರದಲ್ಲಿ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ. ನದಿಯಲ್ಲಿ ತೇಲುತ್ತಿದ್ದ ಮೃತದೇಹವನ್ನು ಸ್ಥಳೀಯರು ಗುರುತಿಸಿ ಪೊಲೀಸ್‌ಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯ ಶಂಕೆಯ ಮೇಲೆ ತನಿಖೆ ಆರಂಭವಾಗಿದೆ.
ಅಭಿಷೇಕ್ ಆಳ್ವ ತಮ್ಮ ತಂದೆಯ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಯುವ ಉದ್ಯಮಿಯಾಗಿದ್ದರು. ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಅವರ ಮನೆತನವು ಕರಾವಳಿ ಪ್ರದೇಶದಲ್ಲಿ ಕಂಬಳ ಸಂಘಟನೆಯಲ್ಲಿ ಗುರುತಿಸಿಕೊಂಡಿದೆ. ಈ ಕುಟುಂಬವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದ್ದು. ಅಭಿಷೇಕ್ ಅವರು ಯುವಕರಲ್ಲಿ ಪ್ರಸಿದ್ಧರಾಗಿದ್ದು, ಸ್ಥಳೀಯ ಸಮುದಾಯದಲ್ಲಿ ಅವರಿಗೆ ಗೌರವವಿತ್ತು. ಆದರೆ ಈ ಆತ್ಮಹತ್ಯೆಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬದವರು ಅವರ ಮೇಲಿನ ಒತ್ತಡಗಳ ಬಗ್ಗೆ ಏನೂ ಹೇಳಿಲ್ಲ, ಆದರೆ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸುತ್ತಿದ್ದಾರೆ.























