ಗಾಂಜಾ ನಶೆಯಲ್ಲಿದ್ದ ಕಾಮುಕನೊಬ್ಬ ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ಬೆಂಗಳೂರು ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಘ್ನೇಶ್ ಅಲಿಯಾಸ್ ದಾಡು ಎಂಬಾತನಿಂದ ಕೃತ್ಯ ನಡೆದಿದ್ದು, ಆರೋಪಿಯನ್ನು ಹಿಡಿದು ಥಳಿಸಿರುವ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ನವೆಂಬರ್ 9ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮದುವೆಗೆ ಎಂದು ಸಂತ್ರಸ್ತೆ ಕುಟುಂಬಸ್ಥರು ತೆರಳಿದ್ದು, ವಿಶೇಷ ಚೇತನ ಯುವತಿಯನ್ನ ಮನೆಯಲ್ಲೇ ಬಿಟ್ಟು ಹೋಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಬಂದ ಗಾಂಜಾ ನಶೆಯಲ್ಲಿದ್ದ ಆರೋಪಿ ವಿಘ್ನೇಶ್, ಚಿಲಕ ಹಾಕಿದ್ದ ಮನೆಗೆ ನುಗ್ಗಿದ್ದಾನೆ. ಬಳಿಕ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ಈ ವೇಳೆ ಮಗಳನ್ನು ನೋಡಿಕೊಂಡು ಹೋಗೋಣ ಎಂದು ತಾಯಿ ಬಂದಾಗ ಮನೆ ಒಳಗಿನಿಂದ ಚಿಲಕ ಹಾಕಿರುವುದು ಗೊತ್ತಾಗಿದೆ. ಹೀಗಾಗಿ ಕಾಲಿನಿಂದ ಒದ್ದು ಆಕೆ ಬಾಗಿಲನ್ನು ತೆರೆದಿದ್ದು, ಮಗಳ ಸ್ಥಿತಿ ಕಂಡು ಶಾಕ್ ಆಗಿದ್ದಾಳೆ. ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ ಆರೋಪಿ, ಆಕೆಯ ಬಟ್ಟೆಗಳನ್ನೆಲ್ಲ ತೆಗಿದಿದ್ದ. ಬಾಗಿಲು ಓಪನ್ ಆದ ಹಿನ್ನಲೆ ಅವಿತು ಕುಳಿತಿದ್ದ. ಸಂತ್ರಸ್ತೆ ತಾಯಿಯ ಕಣ್ಣಿಗೆ ಬಿದ್ದಿದ್ದೇ ತಡ, ಒಳ ಉಡುಪು ಧರಿಸಿ ಎಸ್ಕೇಪ್ ಆಗಿದ್ದಾನೆ.
ಘಟನೆ ಬಳಿಕ ತಕ್ಷಣ ಅಲರ್ಟ್ ಆದ ಸ್ಥಳೀಯರು ಆರೋಪಿ ವಿಘ್ನೆಶ್ನನ್ನು ಹಿಡಿದು ಮನಸೋ ಇಚ್ಛೆ ತಳಿಸಿದ್ದಾರೆ. ಬಳಿಕ ಪೊಲೀಸರಿಗೆ ವಿಘ್ನೇಶ್ನನ್ನು ಒಪ್ಪಿಸಲಾಗಿದ್ದು, ಆರೋಪಿಯನ್ನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಮಾತು ಬಾರದ, ಕಾಲು ಸ್ವಾಧೀನವಿಲ್ಲದ ಯುವತಿ ಮೇಲೆ ಈತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬೆಳವಣಿಗೆ ಇಲ್ಲದೆ ಇನ್ನು ಮಗುವಿನಂತೆ ಇರುವ ವಿಶೇಷ ಚೇತನ ಯುವತಿ ಮೇಲೆ ಕಣ್ಣು ಹಾಕಿರುವ ಈ ಕಾಮುಕನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಏರಿಯಾ ಜನರು ಆಗ್ರಹಿಸಿದ್ದಾರೆ. ಇವತ್ತು ಈ ಮಗುವಿಗೆ ಹೀಗೆ ಮಾಡಿದ್ದಾನೆ, ನಾಳೆ ನಮ್ಮ ಮನೆ ಮಕ್ಕಳಿಗೂ ಇದೇ ರೀತಿ ಮಾಡಬಹುದು. ಹಾಗಾಗಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.























