ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ನ.16 ರಂದು ವಾರ್ಷಿಕ ಕ್ರೀಡಾಕೂಟ ಜರಗಿತು.
ಕ್ರೀಡಾಕೂಟವನ್ನು ಶಿಲ್ಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಶಿಧರ ಆಚಾರ್ಯ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಶಿಧರ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಧ್ವಜಾರೋಹಣವನ್ನು ನೆರವೇರಿಸಿ, ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕವಾಗಿದೆ ಎಂದು ತಿಳಿಸಿದರು. ಕ್ರೀಡಾ ಮಂತ್ರಿ ಸುಚಿತ್ರ ಪ್ರತಿಜ್ಞಾ ವಿಧಿ ಬೋಧಿಸಿದರು.
ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಕುರ್ಕಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಧರ, ಕಾರ್ಯದರ್ಶಿ ಸಮಿತ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.
ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಜಯ ವೇದಿಕೆಯನ್ನು ನಿರ್ಮಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕವನ್ನು, ಪ್ರಶಸ್ತಿ ಪತ್ರದೊಂದಿಗೆ ನೀಡಲಾಯಿತು.
ಕಾರ್ಯಕ್ರಮದ ಸಂಯೋಜಕರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದ ಸ್ವಾಗತಿಸಿದರು. ಶಿಕ್ಷಕರಾದ ಕಿರಣ್ ವಂದಿಸಿ, ಸುಮನ್ ಯು. ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.





















