ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ವಿವಿಧ ಮಹಿಳಾ ಸಬಲೀಕರಣ ಹಾಗೂ ಪುನರ್ವಸತಿ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಯೋಜನೆಗಳಡಿ ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ಅವಧಿಯೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ಮೈಸೂರು ಇವರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳ ಮೂಲಕ ಅಥವಾ ಸೇವಾಸಿಂಧು ವೆಬ್‍ಸೈಟ್ ಮೂಲಕ ಡಿಸೆಂಬರ್ 15ರ ಸಂಜೆ 5.30 ಗಂಟೆ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಆಸಕ್ತಿ ಇರುವವರು ಸಂಬಂಧಿಸಿದ ಮಾನ್ಯ ಸಚಿವರು, ಶಾಸಕರು ಅಥವಾ ನಿಗಮದ ಮಾನ್ಯ ಅಧ್ಯಕ್ಷರ ಶಿಫಾರಸ್ಸು ಪತ್ರವನ್ನು ಪಡೆದು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸುವ ಅವಕಾಶವಿದೆ.
ಇವರನ್ನು ಸಂಪರ್ಕಿಸಿ
ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಜಿಲ್ಲೆಯ ಉಪ ನಿರ್ದೇಶಕರು ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರನ್ನು ಸಂಪರ್ಕಿಸಬಹುದು. ವಿವರಗಳಿಗಾಗಿ ದೂ.ಸಂ.: 0821-2495432 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಈ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವ ಉದ್ಯೋಗ ಹಾಗೂ ಸಮಾಜದ ಮುಖ್ಯಧಾರೆಗೆ ಅವರನ್ನು ಕರೆತರುವ ಗುರಿಯನ್ನು ಹೊಂದಿದ ನಿಗಮದ ಹಲವು ಕಲ್ಯಾಣ ಯೋಜನೆಗಳ ಬಗ್ಗೆ ಹೆಚ್ಚಿನ ಮಹಿಳೆಯರು ಪ್ರಯೋಜನ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಮಹಿಳೆಯರು ವ್ಯಾಪಾರ ಮತ್ತು ಸೇವಾ ಕ್ಷೇತ್ರಗಳಲ್ಲಿ ಸ್ವ-ಉದ್ಯೋಗ ಪ್ರಾರಂಭಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವ ಮಹಿಳೆಯರಿಗೆ ಬ್ಯಾಂಕುಗಳ ಮೂಲಕ ಸಾಲ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಹಾಯಧನವನ್ನು ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಉದ್ಯೋಗಿನಿ ಯೋಜನೆಯಡಿ ವಿಶೇಷ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿಯನ್ನು ರೂ.1.00 ಲಕ್ಷದಿಂದ ರೂ.3.00 ಲಕ್ಷ ಗಳಿಗೆ ಸಹಾಯಧನದ ಮೊತ್ತವನ್ನು ಬ್ಯಾಂಕುಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಶೇ.30 ರಷ್ಟು ಸಹಾಯಧನ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಯೋಜನಾ ವೆಚ್ಚ ಕನಿಷ್ಠ ರೂ.1.00 ಲಕ್ಷ ದಿಂದ ಗರಿಷ್ಠ ರೂ.3.00 ಲಕ್ಷಗಳಿಗೆ ಸಹಾಯಧನದ ಮೊತ್ತವನ್ನು ಬ್ಯಾಂಕುಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ.
ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳು:-
-
ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು,
-
ಮಹಿಳೆಯರಿಗೆ 18 ರಿಂದ 55 ವರ್ಷ ವಯೋಮಿತಿ ಒಳಗಿರಾಬೇಕು.
-
ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ
-
ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ
-
ಅರ್ಜಿದಾರರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ವಿವರ
-
ಆಧಾರ್ ಕಾರ್ಡ್
-
ಸಂಬಂಧಪಟ್ಟ ತಹಸೀಲ್ದಾರರು ನೀಡಿರುವ ಆದಾಯ ದೃಢೀಕರಣ ಪ್ರಮಾಣ ಪತ್ರ (ವಾರ್ಷಿಕ ಆದಾಯದ ಮೀತಿ ಸಾಮಾನ್ಯ / ವಿಶೇಷ ವರ್ಗದವರಿಗೆ ರೂ.1.5 ಲಕ್ಷದ ಒಳಗೆ ಇರಬೇಕು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ರೂ.2.00 ಲಕ್ಷದ ಒಳಗೆ ಇರಬೇಕು)
-
ಸಂಬಂಧಪಟ್ಟ ತಹಸೀಲ್ದಾರರು ನೀಡಿರುವ ಜಾತಿ ಪ್ರಮಾಣ ಪ್ರಮಾಣ ಪತ್ರ.
ದಮನಿತ ಮಹಿಳೆಯರು ತಮ್ಮ ವೃತ್ತಿ ಜೀವನದಿಂದ ಹೊರಬಂದು ಸ್ವಾವಲಂಬಿಗಳಾಗಿ ಜೀವನ ನಡೆಸಲು ಮತ್ತು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಅನುಕೂಲವಾಗುವಂತೆ ನಿಗಮದ ವತಿಯಿಂದ ಪ್ರೋತ್ಸಾಹಧನವಾಗಿ ರೂ.30,000/-ಗಳನ್ನು ಆದಾಯ ಉತ್ಪನ್ನಕರ ಚಟುವಟಿಕೆಗಳನ್ನು ಪ್ರಾರಂಭಿಸಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗುವುದು. ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುವುದು.
ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳು:-
-
ವಯೋಮಿತಿ 18 ವರ್ಷ ಮೇಲ್ಪಿಟ್ಟಿರಬೇಕು
-
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
-
ಜಿಲ್ಲೆಯಲ್ಲಿ ದಮನಿತ ಮಹಿಳೆಯರ ಪುನರ್ವಸತಿಗಾಗಿ ಹಾಗೂ ಸರ್ಕಾರದಿಂದ ಅಧೀಕೃತವಾಗಿ ಗುರುತಿಸಲಾಗಿರುವ ಸಂಸ್ಥೆಯಿಂದ ಅಧೀಕೃತ ದೃಢೀಕರಣ ಪತ್ರ / ಗುರುತಿನ ಚೀಟಿ ಹೊಂದಿರಬೇಕು
-
ಆಧಾರ್ ಕಾರ್ಡ್
-
ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ
-
ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು
-
ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ





















