ಮದುವೆ ಕೆಲ ಗಂಟೆಗಳಿದ್ದ ವರನೋರ್ವ ಫೋಟೋಗ್ರಾಫರ್‌ಗೆ ಕಪಾಳ ಮೋಕ್ಷ ಮಾಡಿದ್ದರಿಂದ ಸಿಟ್ಟಿಗೆದ್ದ ವಧು ಮದುವೆಯನ್ನೇ ನಿಲ್ಲಿಸಿದಂತಹ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಯುವಕ ಹಾಗೂ ಯುವತಿ ಎರಡು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದರು. ಹೀಗಾಗಿ ಇಂದೋರ್‌ನ ಎಂಜಿ ರೋಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಬರುವ ನಂದಲಾಲ್‌ಪುರದಲ್ಲಿರುವ ಕೊಶ್ಟಿ ಸಮಾಜದ ಧರ್ಮಶಾಲೆಯಲ್ಲಿ ಇವರ ಮದುವೆ ನಿಗದಿಯಾಗಿತ್ತು. ಮದುವೆಯ ಸಮಯದಲ್ಲಿ ವರ ಗೌರವ್ ಫೋಟೋಗ್ರಾಫರ್‌ನ ಕೆನ್ನೆಗೆ ಬಾರಿಸಿದ್ದಾನೆ. ಇದರಿಂದ ಸಿಟ್ಟಾದ ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ.
ಬಾಬು ಘನಶ್ಯಾಮ ನಗರದ ವಧು ತಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಗೌರವ್ ಜೊತೆಗೆ ಹಸೆಮಣೆ ಏರುವುದಕ್ಕೆ ಸಿದ್ಧರಾಗಿದ್ದರು. ಬುಧವಾರ ರಾತ್ರಿ ಮದುವೆಯ ಕಾರ್ಯಕ್ರಮಗಳು ನಡೆಯುತ್ತಿದ್ದಾಗಲೇ ವೇದಿಕೆ ಮೇಲೆ ಇದ್ದ ಫೋಟೋಗ್ರಾಫರ್ ಅಲ್ಲಿ ವಧುವಿನ ಪಕ್ಕದಲ್ಲಿ ನಿಂತು ತುಸು ನೀರು ಕುಡಿದಿದ್ದಾನೆ. ಆದರೆ ಇಷ್ಟಕ್ಕೆ ಸಿಟ್ಟಾದ ವರ ಆತನ ಕೆನ್ನೆಗೆ ಬಾರಿಸಿದ್ದಾರೆ. ಆತನ ಈ ವಿಚಿತ್ರ ವರ್ತನೆಯಿಂದ ವಧು ಗಾಬರಿಯಾಗಿದ್ದಾಳೆ.
ಅಲ್ಲದೇ ವರ ಹಾಗೆ ಮಾಡಿದ್ದು ತಪ್ಪು ಎಂದು ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾಳೆ. ಆದರೆ ವರ ತನ್ನ ತಪ್ಪನ್ನು ಅರ್ಥ ಮಾಡಿಕೊಳ್ಳುವ ಬದಲು ಆಕೆಯನ್ನೇ ನಿಂದಿಸುವುದಕ್ಕೆ ಶುರು ಮಾಡಿದ್ದಾನೆ. ಇದರಿಂದ ಬೇಜಾರಾದ ವಧು ಮದುವೆ ನಿಲ್ಲಿಸಿ ಮುಂದಿನ ಸಂಪ್ರದಾಯಗಳನ್ನು ಮಾಡುವುದಕ್ಕೆ ನಿರಾಕರಿಸಿದ್ದಾಳೆ. ಇಂದು ಆತನಿಗೆ ಕ್ಷುಲ್ಲಕ ಕಾರಣಕ್ಕೆ ಥಳಿಸಿದವ ನಾಳೆ ನನ್ನ ಮದುವೆಯಾದ ಮೇಲೆ ನನಗೆ ಥಳಿಸುವುದಿಲ್ಲ ಎಂದು ಏನು ಗ್ಯಾರಂಟಿ ಆತ ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಬಲ್ಲ ಎಂದು ವಧು ಪ್ರಶ್ನಿಸಿದ್ದಾಳೆ. ಅಲ್ಲದೇ ಮದುವೆಗೆ ಬಂದ ದಿಬ್ಬಣವನ್ನು ವಾಪಾಸ್ ಕಳುಹಿಸಿದ್ದಾಳೆ ನಂತರ ಅದೇ ರಾತ್ರಿ ಪೊಲೀಸ್ ಠಾಣೆಗೆ ಹೋದ ವಧು ವರ ಗೌರವ್ ಹಾಗೂ ಆತನ ತಾಯಿ ತರುಣಾ ಅವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಇವರ ಮದುವೆಯ ನಿಶ್ಚಿತಾರ್ಥ ಜುಲೈ 14ರಂದು ನಡೆದಿದ್ದು,ಈ ವೇಳೆ ವರನಿಗೆ ಒಂದು ಚಿನ್ನದ ಉಂಗುರ ಹಾಗೂ 51 ಸಾವಿರ ರೂಪಾಯಿ ನಗದು ನೀಡಲಾಗಿತ್ತು. ಮದುವೆಯ ವೇದಿಕೆ ಮೇಲೆ ಅವರು ಮತ್ತೆ ಹೆಚ್ಚುವರಿ ಹಣ ಹಾಗೂ ಚಿನ್ನವನ್ನು ನೀಡುವಂತೆ ಆಗ್ರಹಿಸಿದ್ದಾರೆ ಎಂದು ವಧು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿಜಯ್ ಸಿಸೋದಿಯಾ ಅವರು ಮಾತನಾಡಿದ್ದು, ಈ ಜೋಡಿ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮದುವೆಗೆ ಕೆಲ ಗಂಟೆಗಳಿರುವಾಗ ಈ ಘಟನೆ ನಡೆದಿದ್ದು, ಸಂಬಂಧ ಕಡಿದು ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕರು ವಧುವಿನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ತನ್ನ ಕೋಪವನ್ನು ನಿಯಂತ್ರಿಸಲಾಗದವನು ಮುಚ್ಚಿದ ಬಾಗಿಲುಗಳ ಹಿಂದೆ ಆಕೆಗೆ ಏನು ಬೇಕಾದರೂ ಮಾಡಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಹಿಳೆಯರು ಅವರಿಗಾಗಿ ಎದ್ದು ನಿಲ್ಲುತ್ತಿರುವುದನ್ನು ನೋಡಿ ಖುಷಿ ಆಗ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇನ್ನೂ ಅನೇಕರು ಇದು ಪ್ರೇಮ ವಿವಾಹವಾದರೂ ಇಲ್ಲಿ ವರದಕ್ಷಿಣೆ ಏಕೆ ಬಂತು ಎಂದು ಕೇಳಿದ್ದಾರೆ. ಪ್ರೇಮದ ನಂತರವೂ ನಿಮ್ಮವರು ವರದಕ್ಷಿಣೆ ಕೇಳಿದರೆ ನೀವು ಆ ಸಂಬಂಧವನ್ನು ಅಲ್ಲಿಗೆ ನಿಲ್ಲಿಸುವುದು ಒಳಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಲವ್ ಮ್ಯಾರೇಜ್ ಆಗಿದ್ದರೂ ವಧುವಿಗೆ ಆತನ ವರ್ತನೆಯ ಬಗ್ಗೆ ಮೊದಲೇ ತಿಳಿಯದೇ ಹೋಯ್ತಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ವಧುವಿನ ನಿರ್ಧಾರದ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.























