ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಮತ್ತು ನಾಯಕರಿಗೆ ಕೊರತೆಯಿಲ್ಲ. ಬಿಜೆಪಿಯಲ್ಲಿ ಮೋದಿ ಬಿಟ್ಟರೇ ಪ್ರಧಾನಿ ಯಾರಾಗ್ತಾರೇ, ನಿಜವಾಗಿಯೂ ನಾಯಕತ್ವ ಕೊರತೆ ಬಿಜೆಪಿಗಿದೆ. ಹೀಗಾಗಿ ಸೋಲಿನ ಹತಾಶೆಯಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದು ವೇಳೆ ಕಮಿಷನ್ ಪಡೆದ ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.
ಮೋದಿ ಕಳೆದ ಹತ್ತು ವರ್ಷದಲ್ಲಿ ಪ್ರಮಾಣಿಕ ಆಡಳಿತ ನಡೆಸಲಿಲ್ಲ. ರೈತರಿಗೆ ಜನಪರ ಕಾರ್ಯಕ್ರಮ ಜಾರಿ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಶ್ವಾಸನೆ ನೀಡಿದ ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಈವರೆಗೂ ಶಕ್ತಿ ಯೋಜನೆಯಡಿ 200 ಕೋಟಿ ಜನ ಸೌಲಭ್ಯ ಪಡೆದಿದ್ದಾರೆ. ಬಡವರೆಲ್ಲಾ ಕಾಂಗ್ರೆಸ್ ಪರ ಆಗ್ತಾರೆ ಅಂತ ಮೋದಿಯವರು ಅಕ್ಕಿ ನೀಡದೇ ರಾಜ್ಯದ ಜನತೆಗೆ ದ್ರೋಹ ಮಾಡಿದ್ರು. ಹೀಗಾಗಿ ಅಕ್ಕಿ ಬದಲಾಗಿ ಐದು ಕೆಜಿ ಅಕ್ಕಿಯ ಹಣ ಫಲಾನುಭವಿ ಅಕೌಂಟ್‌ಗೆ ಹಾಕುತ್ತಿದ್ದೇವೆ ಎಂದರು.
ದೇಶದಲ್ಲಿ ಹಿಂದುಳಿದ, ದಲಿತ, ಎಸ್‌ಟಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಆದರೆ, ಮೋದಿಯವರು ಮೀಸಲಾತಿ ವಿರುದ್ಧ ಇದ್ದಾರೆ. ಜಾತಿ ಜಾತಿಗಳ ವಿರುದ್ಧ ಎತ್ತಿಕಟ್ಟುವ ಮೋದಿ ಸ್ಕೆಚ್ ವಿಫಲಗೊಳಿಸಿ. ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುವ ಬಿಜೆಪಿಗರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದರು.
ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಇಡೀ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅಂಬಾನಿ, ಅದಾನಿಯಂತಹ ಬಂಡವಾಳಶಾಹಿ ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ಒಪ್ಪದ ಮೋದಿ ಯಾರ ಪರ ಎನ್ನುವುದನ್ನು ದೇಶದ ಜನರಿಗೆ ಮನವರಿಕೆಯಾಗಿದೆ ಎಂದು ಆರೋಪಿಸಿದರು.