10ನೇ ತರಗತಿಯ ಬಾಲಕಿಯೊಬ್ಬಳು ಹಸುಗೂಸಿಗೆ ಜನ್ಮ ನೀಡಿದ ಘಟನೆ ಕೊಪ್ಪಳದ ಕುಕನೂರು ತಾಲೂಕಿನ ಶಾಲೆಯ ವಸತಿನಿಲಯದಲ್ಲಿ ನಡೆದಿದೆ. ಕುಕನೂರು ಪೋಲಿಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು,ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕುಕನೂರು ತಾಲೂಕಿನ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಹೊಟ್ಟೆನೋವಿನಿಂದ ನರಳಾಡಿದ್ದು, ತಕ್ಷಣವೇ ಆಕೆಯನ್ನು ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆ ಅಪ್ರಾಪ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ.
ಅಪ್ರಾಪ್ತೆಯು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಅವರು ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿ, ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಕುಕನೂರು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದು, ಬಾಲಕಿಯ ಈ ಸ್ಥಿತಿಗೆ ಕಾರಣನಾದ ಯುವಕನನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಘಟನೆಯಿಂದಾಗಿ ವಸತಿನಿಲಯದಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಆತಂಕಗಳುಂಟಾಗಿವೆ.
ಬಾಲಕಿ 9 ತಿಂಗಳು ಗರ್ಭಿಣಿಯಾಗಿದ್ದರೂ ಅಲ್ಲಿನ ವಾರ್ಡನ್ ಅಥವಾ ಸಿಬ್ಬಂದಿಯ ಗಮನಕ್ಕೆ ಬಾರದೇ ಹೋಗಿದ್ದು ಹೇಗೆ ಎಂದು ಪಾಲಕರು ಮತ್ತು ಗ್ರಾಮಸ್ಥರು ಕಂಗಲಾಗಿದ್ದಾರೆ. ವಸತಿನಿಲಯದ ಸಿಬ್ಬಂದಿಗೆ ಈ ವಿಷಯ ಗೊತ್ತಿದ್ದೂ ಕಣ್ಮುಚ್ಚಿ ಕುಳಿತಿದ್ದರೇ ಎಂಬ ಅನುಮಾನಗಳುಂಟಾಗಿವೆ.























