ನವದೆಹಲಿ, ನವೆಂಬರ್ 26: ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆಯೇ? ಎಂಬ ಅನುಮಾನವೊಂದು ಮೂಡಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬ ಆಘಾತಕಾರಿ ಹೇಳಿಕೆ ಹರಿದಾಡುತ್ತಿವೆ.
ಇದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಮತ್ತು ಅಸಿಮ್ ಮುನೀರ್ ನಡೆಸಿದ ಪಿತೂರಿ ಎಂದು ಬಲೂಚಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ. ಈ ವರದಿಗಳ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ. ಆದರೆ, ಜೈಲಿನ ಹೊರಗೆ ಜಮಾಯಿಸಿರುವ ಜನಸಮೂಹದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇಮ್ರಾನ್ ಖಾನ್ ಅವರ ಸಹೋದರಿಯರು ಮತ್ತು ಕುಟುಂಬದ ಇತರ ಸದಸ್ಯರನ್ನು ಜೈಲಿಗೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ ಎಂಬ ಹೇಳಿಕೆಗಳು ಹೊರಬಿದ್ದಿವೆ. ಇದು ಕೊಲೆಯ ಅನುಮಾನಗಳನ್ನು ಹೆಚ್ಚಿಸುತ್ತಿದೆ.
ಹಲವಾರು ಸುದ್ದಿವಾಹಿನಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಬಂಧನದಲ್ಲಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಸಿಮ್ ಮುನೀರ್ ಮತ್ತು ಅವರ ಐಎಸ್ಐ ಆಡಳಿತವು ಕೊಂದಿದೆ ಎಂಬ ವರದಿಗಳು ಪಾಕಿಸ್ತಾನದ ಪಂಜಾಬ್ ಜೈಲಿನೊಳಗಿಂದ ಹೊರಬರುತ್ತಿವೆ. ಈ ಮಾಹಿತಿ ನಿಜವೆಂದು ದೃಢಪಟ್ಟರೆ ಅದು ಭಯೋತ್ಪಾದಕ ಪಾಕಿಸ್ತಾನದ ಸಂಪೂರ್ಣ ಅಂತ್ಯವನ್ನು ಸೂಚಿಸುತ್ತದೆ. ಈ ಮೂಲಕ ಪಾಕಿಸ್ತಾನ ಇಡೀ ಜಗತ್ತಿನ ನಂಬಿಕೆಯನ್ನು ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ.
ಪಾಕಿಸ್ತಾನ್ ತೆಹ್ರೀಕ್ ಐ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಗಸ್ಟ್ 2023ರಿಂದ ಜೈಲಿನಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನ ಅವರ ಭೇಟಿಗೆ ಅಘೋಷಿತ ನಿಷೇಧ ಹೇರಿದೆ. ಅವರ ಕುಟುಂಬಸ್ಥರಿಗೂ ಇಮ್ರಾನ್ ಖಾನ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ಇದು ಅನುಮಾನಗಳನ್ನು ಹುಟ್ಟುಹಾಕಿದೆ. ಹಾಗೇ, ಇಮ್ರಾನ್ ಖಾನ್ ಅವರ ಮೃತದೇಹದ್ದು ಎನ್ನಲಾದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಾವಿನ ವದಂತಿಗಳ ನಡುವೆ ಅವರನ್ನು ಭೇಟಿಯಾಗಲು ಹೋದ ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರ ಮೇಲೂ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಅವರ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.
ಪಾಕಿಸ್ತಾನಿ ಮೂಲಗಳನ್ನು ಉಲ್ಲೇಖಿಸಿ ಅಫ್ಘಾನಿಸ್ತಾನ್ ಟೈಮ್ಸ್ ವರದಿ ಮಾಡಿದ್ದು, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. “ಅನುಮಾನಾಸ್ಪದ ಹತ್ಯೆಯ ನಂತರ ಅವರ ದೇಹವನ್ನು ಜೈಲಿನಿಂದ ಹೊರಗೆ ಹಾಕಲಾಗಿದೆ” ಎಂದು ವರದಿಯಲ್ಲಿ ಹೇಳಿದೆ.






















