ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಚಿತ್ತಗಾಂಗ್ ಜಿಲ್ಲೆಯ ರೌಜನ್ ಎಂಬಲ್ಲಿ ಸ್ಥಳೀಯ ಬಾಂಗ್ಲಾದೇಶೀಯರಿಂದ ಹಿಂದೂ ಕುಟುಂಬವೊಂದು ವಾಸವಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು, ಗಂಡ-ಹೆಂಡತಿ-ಮಕ್ಕಳು ಇದ್ದ ಆ ಕುಟುಂಬವನ್ನು ಹೊರಗಡೆಯಿಂದ ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಒಳಗಿದ್ದ ಆ ಕುಟುಂಬ ಸತತ ಪ್ರಯತ್ನದಿಂದ ಆ ಬೆಂಕಿಯಿಂದ ಪಾರಾಗಿ ತನ್ನ ಜೀವ ಉಳಿಸಿಕೊಂಡಿದೆ.
ಆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಸ್ಲಿಮಾ ನಸ್ರೀನ್, ಬಾಂಗ್ಲಾದೇಶ ಸರ್ಕಾರ ಸಲಹೆಗಾರನಾಗಿ, 2024ರಿಂದ ಅಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಇಡೀ ದೇಶದ ಆಡಳಿತ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಡಾ. ಮೊಹಮ್ಮದ್ ಯೂನಸ್ ಅವರನ್ನು ತೀವ್ರವನ್ನು ಟೀಕಿಸಿದ್ದಾರೆ.
ಘಟನೆ ಬಗೆಗಿನ ತಮ್ಮ ಆಕ್ರೋಶವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿರುವ ಅವರು, “ಚಿತ್ತಗಾಂಗ್‌ನ ರೌಜಾನ್‌ನಲ್ಲಿ, ಅನಾಗರಿಕ ಮುಸ್ಲಿಮರು ಹಿಂದೂ ಮನೆಗಳ ಬಾಗಿಲುಗಳನ್ನು ಹೊರಗಿನಿಂದ ಲಾಕ್ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹಿಂದೂಗಳಿಗೆ ಸೇರಿದ ಅನೇಕ ಮನೆಗಳು ಸುಟ್ಟು ಭಸ್ಮವಾಗಿವೆ. ಹಿಂದೂಗಳು ತಮ್ಮ ಮನೆಗಳಿಂದ ಬಹಳ ಕಷ್ಟಪಟ್ಟು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಪುನಃ ಯಾವ ಭರವಸೆಯ ಮೇಲೆ ತಮ್ಮ ಮನೆಗಳನ್ನು ಮತ್ತೆ ನಿರ್ಮಿಸಬೇಕು? ಹಿಂದೂ ದ್ವೇಷಿಗಳು ಹಾಗೂ ಅನಾಗರಿಕ ಮುಸ್ಲಿಮರ ವಿರುದ್ಧ ಬಾಂಗ್ಲಾದೇಶ ಸರ್ಕಾರದ ಸಲಹೆಗಾರ ಯೂನಸ್ ಕ್ರಮ ಕೈಗೊಳ್ಳುತ್ತಾರೆಯೇ? ಅವರು ಹಿಂದೂಗಳಿಗೆ ಪರಿಹಾರವನ್ನು ನೀಡುತ್ತಾರೆಯೇ? ಈ ಸುದ್ದಿ ವಿದೇಶಕ್ಕೆ ಹರಡದ ಕಾರಣ ಅವರು ಅದನ್ನು ನಿರ್ಲಕ್ಷಿಸುತ್ತಾರೆಯೇ ಹಾಗೂ ಅವರು ಹಿಂದೂಗಳನ್ನು ಸಾಯಲು ಬಿಡುತ್ತಾರೆಯೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿಯ ಡಾ. ಯೂನಸ್ ವಿರುದ್ಧ ಹರಿಹಾಯ್ದಿರುವ ಅವರು, “ಡಾ. ಮುಹಮ್ಮದ್ ಯೂನಸ್ ಗ್ರಾಮೀಣ ಅಮೆರಿಕ ಎಂಬ ಸರ್ಕಾರೇತರ ಸಂಸ್ಥೆಯ (ಎನ್.ಜಿ.ಒ) ನಿರ್ದೇಶಕ ಮತ್ತು ಸಹ-ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಕಳೆದ ನಾಲ್ಕು ವರ್ಷಗಳಿಂದ ಸಂಸ್ಥೆಯಿಂದ ಪರಿಹಾರವನ್ನು ಪಡೆದಿದ್ದಾರೆ. ಅವರು ಪ್ರಸ್ತುತ ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾಗಿ ವಾಸ್ತವಿಕ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024 ರಿಂದ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರ ಅಧಿಕಾರಾವಧಿಯಲ್ಲಿ ಮಾನವ ಹಕ್ಕುಗಳು ಅನೇಕ ರೀತಿಯಲ್ಲಿ ಉಲ್ಲಂಘನೆಯಾಗಿದೆ. ಹಿಂಸಾಚಾರ, ಉದ್ರಿಕ್ತರಿಂದ ಗುಂಪು ಹತ್ಯೆಗಳು ಮತ್ತು ಕೋಮುದಾಳಿಗಳು ಪ್ರತಿದಿನ ನಡೆಯುತ್ತಿವೆ.
” ಯೂಸನ್ ಅವರ ಮೇಲ್ವಿಚಾರಣೆಯಲ್ಲಿ, ಬಾಂಗ್ಲಾದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆ, ಅವರನ್ನು ಬಾಯಿ ಮುಚ್ಚಿಸಲಾಗುತ್ತಿದೆ ಅಥವಾ ಬೆದರಿಸಲಾಗುತ್ತದೆ. ಅವರ ಆಡಳಿತದಲ್ಲಿ ಈ ರೀತಿಯ ಹಿಂಸಾಚಾರಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಅವರು, ಅಂತರರಾಷ್ಟ್ರೀಯ ಸಮುದಾಯಕ್ಕೆ ಮಹಿಳಾ ಆರ್ಥಿಕ ಸಬಲೀಕರಣದ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ! ಮಹಿಳೆಯರ ಸಬಲೀಕರಣ, ಬಡತನ ನಿರ್ಮೂಲನೆಯಲ್ಲಿ ಮಹಿಳೆಯರ ಪಾತ್ರ ಹಾಗೂ ಅವರಿಗೆ ಸ್ವತಂತ್ರವಾಗಿ ಬದುಕಲು ನೀಡಬಹುದಾದ ಉತ್ತೇಜನಗಳ ಬಗ್ಗೆ ಅವರು ಭಾಷಣ ಬಿಗಿಯುವುದನ್ನು ನೋಡಿ ಅವರಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗಳು ಸಿಗುತ್ತಿದ್ದು ಅವೆಲ್ಲವನ್ನೂ ಡಾ. ಯೂಸನ್ ಎಂಜಾಯ್ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದರೆ, ಅವರ ದೇಶವಾದ ಬಾಂಗ್ಲಾದಲ್ಲಿ ಕಾರ್ಖಾನೆಗಳು ಸುಟ್ಟುಹೋಗುತ್ತಿವೆ. ಅದರಿಂದ ಬಾಂಗ್ಲಾದೇಶದ ಆರ್ಥಿಕತೆಯ ಬೆನ್ನೆಲುಬು ಆಗಿರುವ ಟೆಕ್ಸ್ ಟೈಲ್ಸ್ ಕೈಗಾರಿಕೆಗಳ ಕಾರ್ಮಿಕರನ್ನು ನಿರ್ಗತಿಕರನ್ನಾಗಿ ಮಾಡಲಾಗುತ್ತಿದೆ” ಎಂದು ಅವರು ಆಪಾದಿಸಿದ್ದಾರೆ.























