ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನ ಪತ್ರವನ್ನು ಡಿ.24ರಂದು ಬಿಡುಗಡೆಗೊಳಿಸಿದರು.
ದೇವಸ್ಥಾನನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.
ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಅಯ್ಯಪ್ಪ ನೂತನ ಗುಡಿ ನಿರ್ಮಾಣವಾಗಲಿರುವ ಜಾಗವನ್ನು ವೀಕ್ಷಣೆ ನಡೆಸಿದ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವಸ್ಥಾನದ ಮುಂಭಾಗದಲ್ಲಿರುವ ಅಯ್ಯಪ್ಪ ಮಂದಿರವನ್ನು ತೆರವುಗೊಳಿಸಿ ದೇವಸ್ಥಾನದ ಹಿಂಭಾಗಕ್ಕೆ ಸ್ಥಳಾಂತರಿಸಲಾಗುವುದು. ಹೊಸ ಮಂದಿರ ನಿರ್ಮಾಣವಾಗಲಿರುವ 6 ಸೆಂಟ್ಸ್ ಜಾಗವು ನಿತ್ಯಾನಂದ ಶೆಟ್ಟಿಯವರ ಅಧೀನದಲ್ಲಿದೆ. 25 ವರ್ಷಗಳ ಹಿಂದೆ ಅವರು ಪಡೆದುಕೊಂಡಿದ್ದ ಈ ಜಾಗಕ್ಕೆ ಅವರು ರೂ.90 ಲಕ್ಷ ಬೇಡಿಕೆ ಇಟ್ಟಿದ್ದರು. ಅವರನ್ನು ಮನವೊಳಿಸಲಾಗಿದ್ದು ದೇವಸ್ಥಾನಕ್ಕಾಗಿ ರೂ.25ಲಕ್ಷಕ್ಕೆ ಜಾಗ ನೀಡಲು ಅವರು ಒಪ್ಪಕೊಂಡಿದ್ದಾರೆ. ಇದರಲ್ಲಿ ಪ್ರಥಮವಾಗಿ ಅವರಿಗೆ ರೂ.10ಲಕ್ಷ ನೀಡಲಾಗುವುದು. ಈ ಜಾಗದಲ್ಲಿ ರೂ.50ಲಕ್ಷದಲ್ಲಿ ನೂತನ ಅಯ್ಯಪ್ಪ ಮಂದಿರ ನಿರ್ಮಿಸಲಾಗುವುದು. ಸಭಾ ಭವನ ತೆರವುಗೊಳಿಸುವ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಲಾಗಿದೆ. ಅನುಮೋದನೆ ಬಂದ ಕೂಡಲೇ ತರೆವುಗೊಳಿಸುವ ಕೆಲಸ ಮಾಡಲಾಗುವುದು. ಅದಕ್ಕೆ ಮೊದಲು ಇನ್ನೊಂದು ಸಭಾ ಭವನ ನಿರ್ಮಿಸಿದಾಗ ಜನರಿಗೆ ಸಮಾದಾನ ಆಗಬಹುದು. ಶ್ರೀಅಯ್ಯಪ್ಪ ಗುಡಿಯಲ್ಲಿ ಡಿ.29ರಂದು ಅನುಜ್ಞಾ ಕಲಶ ನಡೆಸಿ, ಗುಡಿಯನ್ನು ತೆರವುಗೊಳಿಸಲಾಗುವುದು. ಇದಕ್ಕೆ ಪೂರಕವಾದ ಪ್ರಾಯಶ್ಚಿತ್ತ ಹೋಮಗಳು ನಡೆಯಲಿದೆ ಎಂದು ಶಾಸಕರು ಹೇಳಿದರು.
ಪುತ್ತೂರಿನಲ್ಲಿ ಸಾಕಷ್ಟು ಭಜನಾ ಮಂದಿರಗಳಿದ್ದು ಆಸಕ್ತರಿ ಉಳ್ಳವರಿಗೆ ವಾರದಲ್ಲಿ ಒಂದು ದಿನ ದೇವಸ್ಥಾನ ಶುಚಿಗೊಳಿಸಲು ಅವಕಾಶವಿದೆ. ಆಸಕ್ತಿಯಿರುವವರು ದೇವಸ್ಥಾನದ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ನೀವು ಯಾವ ದಿನ ಬರಬೇಕು ಎಂದು ತಿಳಿಸಲಾಗುವುದು. ಶುಚಿತ್ವಕ್ಕೆ ಬೇಕಾದ ಪರಿಕರಗಳನ್ನು ದೇವಸ್ಥಾನದಿಂದ ನೀಡಲಾಗುವುದು. ಸ್ವಚ್ಚತೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಶಾಸಕರು ವಿನಂತಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ., ಸುಭಾಷ್ ರೈ, ನಳಿನಿ ಪಿ.ಶೆಟ್ಟಿ, ಈಶ್ವರ ಬೆಡೇಕರ್, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರವೀಂದ್ರನಾಥ ಶೆಟ್ಟಿ ಬಳ್ಳಮಜಲು, ಉದ್ಯಮಿ ಶಿವರಾಮ ಆಳ್ವ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಕೌಶಲ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ, ಪೂಡಾ ಸದಸ್ಯ ನಿಹಾಲ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಸಹಿತ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಅಯ್ಯಪ್ಪ ಮಂದಿರದಲ್ಲಿ ಡಿ.29ರಂದು ಕುಂಟಾರು ರವೀಂಶ ತಂತ್ರಿಗಳ ನೇತೃತ್ವದಲ್ಲಿ, ಅರ್ಚಕರು ಹಾಗೂ ಭಕ್ತಾದಿಗಳ ಸಹಕಾರದಲ್ಲಿ 108 ತೆಂಗಿನಕಾಯಿ ಹೋಮ, ಶತರುದ್ರಾಭಿಷೇಕ, ನವಗ್ರಹಶಾಂತಿ ಹೋಮ, ವನದುರ್ಗಾಹೋಮ, ಡಿ.30ರಂದು ಅಯ್ಯಪ್ಪ ಗುಡಿಯಲ್ಲಿ ಗಣಹೋಮ, ಅಭಿಷೇಕ, ಸಭಾಭವನದಲ್ಲಿ ವಿಷ್ಣುಸಹಸ್ರನಾಮ ಹಾಗೂ ಹೋಮಗಳು, ನಾಗನ ಸನ್ನಿಧಿಯಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ವಟು ಆರಾಧನೆಗಳು ನಡೆಯಲಿದೆ. ಮುಂದಿನ ದಿನಗಳಲ್ಲಿ ನಾಗ ಸಾನಿಧ್ಯವನ್ನು ಮೂಲ ನಾಗನ ಕಟ್ಟೆಗೆ ಸ್ಥಳಾಂತರ ಹಾಗೂ ದೇವಸ್ಥಾನದ ಒಳಭಾಗದಲ್ಲಿ ನವಗ್ರಹ ಪ್ರತಿಷ್ಠೆ ನಡೆಯಲಿದೆ. ಜ.6ರಂದು ಸಂಕಷ್ಟ ಚತುರ್ಥುಯ ದಿನ ಲೋಕಕಲ್ಯಾಣಾರ್ಥವಾಗಿ ಗಣಪತಿ ದೇವರಿಗೆ ಮೂಡಪ್ಪ ಸೇವೆ ನಡೆಯಲಿದೆ. ಆ ದಿನ ಸಂಜೆ 6 ಗಂಟೆಯಿಂದ ಮೂಡಪ್ಪ ಸೇವೆ ಪ್ರಾರಂಭಗೊಳ್ಳಲಿದೆ.






















