ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಮೂಡಾಯುರುಗುತ್ತು ಆರಿಗೊ ನೇಮೋತ್ಸವ. ತುಳುನಾಡಿನ ಸತ್ಯಧರ್ಮದ ಪ್ರತಿರೂಪಗಳಂತಿರುವ ಕಾರಣಿಕ ಅವಳಿ ಪುರುಷರಾದ ಕೋಟಿ ಚೆನ್ನಯರು ಪಡುಮಲೆಯಲ್ಲಿ ಜನಿಸಿ ತಮ್ಮ ಶಕ್ತಿ ಸಾಮರ್ಥ್ಯದ ಕಾಲದಲ್ಲಿ ಊರೂರು ತಿರುಗಾಡುತ್ತಾರೆ. ದೈವಪಟ್ಟಕ್ಕೆ ಏರಿರುವ ಪವಾಡ ಪುರುಷರು ತಾವು ವ್ಯಾಯಾಮ ಮಾಡಿ ಶಕ್ತಿ ಸಂಪಾದಿಸಿದ ವ್ಯಾಯಾಮ ಶಾಲೆ ‘ಗರಡಿ’ ಅಥವಾ ‘ಗರೋಡಿ’ ಎಂದೇ ಹೆಸರು ಪಡೆದಿದೆ. ದೈವಾಂಶ ಸಂಭೂತರಾಗಿರುವ ಕಾರಣ ಅವರಿಗೆ ಗರಡಿ ನಿರ್ಮಿಸಿ ಪೂಜಿಸಿ, ಆರಾಧಿಸುವ ಕ್ರಮ ಅನಾದಿಕಾಲದಿಂದ ನಡೆದು ಬಂದ ರೂಢಿ ಸಂಪ್ರದಾಯವಾಗಿದೆ.

ಪಡುಮಲೆ ಅರಮನೆ ಬಿಟ್ಟ ಕೋಟಿ ಚೆನ್ನಯರು ಸುತ್ತಾಡುತ್ತಾ ಬಂದು ಒಂದು ಕಡೆ ಕಟ್ಟೆಯಲ್ಲಿ ಕುಳಿತು ಹಾಲು ಕುಡಿಯುತ್ತಾರೆ. ಹಾಲು ಕುಡಿದು ತೇಗಿದ (ತುಳುವಿನಲ್ಲಿ ‘ಅರಿಗ’) ಸ್ಥಳವೇ ಪುತ್ತೂರು ತಾಲೂಕಿನ ಈಗಿನ ಚಿಕ್ಕಮುಡ್ನೂರು ಗ್ರಾಮದ ಮೂಡಾಯುರುಗುತ್ತು ಆರಿಗೊ ಸ್ಥಳವಾಗಿದೆ. ಇಲ್ಲಿಗೆ ಅರಿಗೋ ಎಂಬ ಹೆಸರು ಬರಲೂ ಇದೇ ಕಾರಣ ಎಂದು ಪ್ರತೀತಿ ಇದೆ. ಈ ಗರಡಿ ಕೋಟಿ ಚೆನ್ನಯರ ನೇಮೋತ್ಸವಕ್ಕೆ ಆದಿ ಗರಡಿ ಎಂದೇ ಖ್ಯಾತಿಯಾಗಿದೆ. ಸುಮಾರು 185 ವರ್ಷಗಳ ಹಿಂದೆಯೇ ಇಲ್ಲಿ ಬೈದೇರುಗಳ ನೇಮೋತ್ಸವ ನಡೆಯುತ್ತಿತ್ತು ಎಂಬುದಕ್ಕೆ ಇಂದಿಗೂ ದಾಖಲೆಗಳಿವೆ. ಲಭ್ಯವಾಗಿರುವ ದಾಖಲೆಯಲ್ಲಿ ಪ್ರಜೋತ್ಪತ್ತಿ ಸಂವತ್ಸರ ಎಂದು ನಮೂದಿಸಲಾಗಿರುವುದರಿಂದ ಸುಮಾರು 185 ವರ್ಷಗಳ ಹಿಂದಿನದ್ದು ಎಂದು ಲೆಕ್ಕಾಚಾರ ಹಾಕಬಹುದಾಗಿದೆ.
ಕೋಟಿ ಚೆನ್ನಯರ ಆದಿ ಮತ್ತು ಅಂತ್ಯ ಸ್ಥಳಗಳಲ್ಲಿ ಮಾತ್ರ ವಿಷ್ಣುಮೂರ್ತಿ ದೇವಸ್ಥಾನಗಳಿವೆ. ಹಾಗಾಗಿ ಆರಿಗೋ ಮೂಡಾಯೂರು ಕೂಡಾ ಕೆಮ್ಮಾಯಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ನಿಕಟ ಸಂಪರ್ಕವಿರುವ ಗರಡಿಯಾಗಿದೆ. ಬೊಳುವಾರುನಿಂದ ಉಪ್ಪಿನಂಗಡಿ ರಸ್ತೆಯಲ್ಲಿ ಸಾಗಿ ಕೆಮ್ಮಾಯಿ ಜಂಕ್ಷನ್‌ನಿಂದ ಬಲಕ್ಕೆ ಮೂಡಾಯೂರು ರಸ್ತೆಯಲ್ಲಿ ಅರ್ಧ ಕಿಲೋಮಿಟರ್ ಸಾಗಿದರೆ ವಿಷ್ಣುಮೂರ್ತಿ ದೇವಾಲಯ ಮತ್ತು ಮೂಡಾಯೂರುಗುತ್ತು ಭಂಡಾರದ ಚಾವಡಿ ಕಾಣಸಿಗುತ್ತದೆ. ಅಲ್ಲಿಂದ ಮುಂದೆ ಅರ್ಧ ಕಿಲೋಮೀಟರ್ ಸಾಗಿದರೆ ಅರಿಗೋ ಬೈದೇರುಗಳ ಗರಡಿ ಪ್ರಕೃತಿ ರಮಣೀಯ ತಾಣದಲ್ಲಿ ಕಂಡುಬರುತ್ತದೆ.
ಅಲ್ಲಿಂದ ಬಳಿಕ ಇಲ್ಲಿ ನಿರಂತರವಾಗಿ ನೇಮೋತ್ಸವ ನಡೆಯುತ್ತಿದೆ. ಜೈನರಸರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅರಸರ ಆಳ್ವಿಕೆಯ ಬಳಿಕವೂ ಮೂಡಾಯೂರುಗುತ್ತು ಜೈನ ಪರಂಪರೆಯವರು ಇಂದಿಗೂ ಇಲ್ಲಿನ ಮುಖ್ಯಸ್ಥರಾಗಿದ್ದಾರೆ. ಈ ಮೊದಲು ಮೂಡಾಯೂರುಗುತ್ತು ರಾಜವರ್ಮ ರೈ ರವರು ಸುಮಾರು 60 ವರ್ಷಗಳ ಕಾಲ ಆಡಳಿತ ನಡೆಸಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರು.
ಪ್ರಸ್ತುತ ಪುತ್ತೂರು ಮಹಾವೀರ ಆಸ್ಪತ್ರೆಯ ಡಾ. ಎಂ. ಅಶೋಕ್ ಪಡಿವಾಳ್ ಮತ್ತು ಮೂಡಾಯೂರು ಕುಟುಂಬಸ್ಥರು ಹಾಗೂ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು ರವರ ನೇತೃತ್ವದಲ್ಲಿ ವಾರ್ಷಿಕ ಉತ್ಸವಾದಿ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲು ಗ್ರಾಮ ಸಾನ್ನಿಧ್ಯ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರುಗುತ್ತುವಿನಿಂದ ಭಂಡಾರ ತೆಗೆದು ಬೈದೇರುಗಳ ತಂಬಿಲ ಸೇವೆ ನಡೆಯುತ್ತದೆ.
ಮರುದಿನ ರಾತ್ರಿ ಕ್ಷೇತ್ರದ ಇತರ ಸಾನ್ನಿಧ್ಯಗಳಾದ ಇಷ್ಟದೇವತೆ ಮತ್ತು ಏಳ್ನಾಡು ದೈವಗಳ ನೇಮೋತ್ಸವ ನಡೆಯುತ್ತವೆ. ಅದರ ಮರುದಿನ ಶ್ರೀ ಬೈದೇರುಗಳ ನೇಮ, ರಾತ್ರಿ ಮಾಣಿಬಾಲೆ ನೇಮ, ಕಡ್ಸಲೆ ಬಲಿ ವಗೈರೆ ನಡೆದು ಸಂಪನ್ನಗೊಳ್ಳುತ್ತದೆ. ಪ್ರಾಚೀನ ಗರಡಿಯಾಗಿರುವುದರಿಂದ ಇಲ್ಲಿನ ಎಲ್ಲಾ ಆಚರಣೆಗಳು ಇಂದಿಗೂ ಪೂರ್ವ ಸಂಪ್ರದಾಯ ಪ್ರಕಾರವೇ ನಡೆದು ಬರುತ್ತಿದೆ.
ಕೋಟಿಚೆನ್ನಯರು ಬಂದು ಕುಳಿತ ಕಟ್ಟೆ ಅತ್ಯಂತ ಕಾರಣಿಕತೆಯಿಂದ ಕೂಡಿದ್ದು ಕಟ್ಟೆದಮಜಲು ಎಂದೇ ಕರೆಯಲಾಗುತ್ತದೆ. ಈ ಕಟ್ಟೆಯಲ್ಲಿ ಮಾವಿನ ಮರವೊಂದು ಇದ್ದು, ಕೆಲ ವರ್ಷಗಳ ಹಿಂದೆ ಅಂದರೆ 1970 ರಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾಲದಲ್ಲಿ ಅದು ಅಳಿದು ಹೋಯಿತು. ಆದರೆ ಅದೇ ಕಟ್ಟೆಯಲ್ಲಿ ಹೊಸತೊಂದು ಮಾವಿನ ಗಿಡವೊಂದು ತನ್ನಿಂದತಾನೇ ಹುಟ್ಟಿ ಸ್ಥಳೀಯರನ್ನು ಬೆರಗುಗೊಳಿಸಿದ ಘಟನೆಯೂ ನಡೆದಿದೆ. ಅತ್ಯಲ್ಪ ಸಮಯದಲ್ಲಿಯೇ ಆ ಗಿಡ ಮರವಾಗಿ ಬೆಳೆದು ನಿಂತಿದೆ. ಇದು ಕೋಟಿ ಚೆನ್ನಯರ ಕಲಿಯುಗ ಶಕ್ತಿಯ ಪ್ರತೀಕ ಎಂದು ಭಕ್ತರು ಹೇಳಿಕೊಳ್ಳುತ್ತಾರೆ.
ಕೋಟಿ ಚೆನ್ನಯರ ಮೂರ್ತಿ ಮತ್ತು ಅವರು ಧರಿಸುವ ಆಭರಣಗಳು ಅತ್ಯಂತ ಪುರಾತನವೂ, ಬಹಳ ವಿನ್ಯಾಸಗಳಿಂದ ಕೂಡಿ ನೋಡಲು ಅತ್ಯಾಕರ್ಷಕವಾಗಿವೆ. ದಾಖಲೆಯೊಂದರ ಪ್ರಕಾರ ಇಲ್ಲಿನ ಬೈದೇರುಗಳ ಆಭರಣ ಒಡವೆಗಳು ಪಂಜ ಎಂಬಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ಬಾಡಿಗೆಗೆ ಕೊಂಡು ಹೋಗಿರುವ ಬಗ್ಗೆ ನಮೂದಿಸಲಾಗಿದೆ.
ಗರಡಿಯ ಮೇಲ್ಭಾಗದಲ್ಲಿ ಸುಮಾರು 200 ವರ್ಷಗಳಷ್ಟು ಪುರಾತನವಾದ ‘ಬ್ರಹ್ಮರಗುಂಡ’ ಸ್ಥಳವಿದೆ. ಬಹಳ ಹಿಂದೆ ನೇಮೋತ್ಸವ ಇಲ್ಲಿಯೇ ನಡೆಯುತ್ತಿತ್ತು. ಈಗಲೂ ಅಲ್ಲಿ ದೀಪ ಉರಿಸಿ ಕೋಟಿ ಚೆನ್ನಯರ ನೇಮ ನಡೆಯುತ್ತದೆ. ಯಾವುದೇ ವಿದ್ಯುತ್ ದೀಪಗಳಿಲ್ಲದೇ ಕೇವಲ ದೊಂದಿ ಬೆಳಕಿನಲ್ಲಿ ಕೋಟಿ ಚೆನ್ನಯರ ನರ್ತನ ನಡೆಯುತ್ತದೆ. ಇಲ್ಲಿಗೆ ಮಹಿಳೆಯರ ಪ್ರವೇಶವೂ ನಿಷಿದ್ಧವಾಗಿದೆ.
ಪ್ರತೀ ಮಂಗಳವಾರ ಇಲ್ಲಿ ಅಕ್ಕಿ ಹಾಲು ಸಮರ್ಪಣೆ, ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಇಲ್ಲಿಗೆ ‘ಪೆರ್ಮಂಡ’ ಎಂದು ಹೆಸರು ಇದೇ ಹಿನ್ನೆಲೆಯಲ್ಲಿ ಬಂದಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಊರಿನ ಭಕ್ತರಲ್ಲದೇ ಪರವೂರಿನಿಂದಲೂ ನೂರಾರು ಮಂದಿ ಆಗಮಿಸಿ ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಳ್ಳುವ ದೃಶ್ಯಕಂಡುಬರುತ್ತದೆ. ಅಲ್ಲದೇ ಇಲ್ಲಿನ ಕೋಟಿ ದೈವದ ಪಾತ್ರಿ ಶೀನ ಪೂಜಾರಿಯವರು ನಾನಾ ರೀತಿಯ ರೋಗಗಳಿಗೆ ಕ್ಷೇತ್ರ ಶಕ್ತಿಯನ್ನು ನಂಬಿ ಔಷಧಿ ನೀಡುತ್ತಿದ್ದಾರೆ. ನಾನಾ ಊರುಗಳಿಂದ ಇಲ್ಲಿಗೆ ರೋಗ ರುಜಿನಗಳ ಪರಿಹಾರಕ್ಕಾಗಿ ಆಗಮಿಸುತ್ತಾರೆ.
ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಗರಡಿಯ ನೇಮೋತ್ಸವಕ್ಕೆ ಸಂಬಂಧಿಸಿದ ಎಲ್ಲಾ ಚಾಕರಿ ಸೇವೆ ಮಾಡುವವರಿಗೆ ವಂಶಪಾರಂಪರ‍್ಯತೆಯಿದೆ. ದೈವದ ಪಾತ್ರಿ, ಭಂಡಾರಿ, ಮಡಿವಾಳ, ಗರ್ನಲ್ ತಯಾರಕರು ಹೀಗೆ ಪ್ರತಿಯೊಬ್ಬರೂ ಇಲ್ಲಿನ ನೇಮೋತ್ಸವ ಕಾಲಕ್ಕೆ ಎಲ್ಲಿದ್ದರೂ ಹಾಜರಾಗಿ ತಮ್ಮ ತಮ್ಮ ಸೇವೆಗೈಯುತ್ತಾರೆ. ಪ್ರತಿಯೊಂದು ಚಾಕರಿಗೂ ಗ್ರಾಮದೊಳಗೆ ಸೇವೆ ಮಾಡುವವರಿದ್ದಾರೆ. ಹಿಂದಿನಿಂದಲೂ ಇದೇ ಸಂಪ್ರದಾಯವಿದ್ದು, ಅವರವರ ವಂಶಸ್ಥರೇ ಬಂದು ಸೇವೆಗೈಯುತ್ತಾರೆ. ನಾಗಸ್ವರ ವಾದ್ಯಕಲಾವಿದರ ಸೇವೆ ಇಲ್ಲಿ ಗುರುತರವಾದುದು. ಬಹಳ ಹಿಂದೆ ಡೋಗ್ರ ಸೇರಿಗಾರ ಈ ಸೇವೆ ಮಾಡುತ್ತಿದ್ದರು. ಪ್ರಸ್ತುತ ದಿ. ಬಾಬು ಸೇರಿಗಾರ ರವರ ಮಕ್ಕಳು ಹಾಗೂ ಮೊಮ್ಮಕ್ಕಳು ಈ ಸೇವೆ ಮಾಡುತ್ತಿದ್ದಾರೆ.

ಇಲ್ಲಿ ಅನಾದಿಕಾಲದಿಂದಲೇ ಭತ್ತದ ಸಣ್ಣ ಮುಡಿ (ತುಳುವಿನಲ್ಲಿ ‘ಕುರುಂಟು’) ಹರಕೆ ಅರ್ಪಿಸಿ ವಿಶೇಷ ಪ್ರಾರ್ಥನೆ, ಸಂಕಷ್ಟಗಳನ್ನು ನಿವಾರಿಸಿಕೊಳ್ಳುತ್ತಾರೆ. ಬಹಳ ಹಿಂದೆ ಭತ್ತದ ಗದ್ದೆಗಳು ಸಾಕಷ್ಟಿದ್ದ ಕಾರಣ ಇಲ್ಲಿಗೆ ಹೆಚ್ಚಾಗಿ ಇದು ಹರಕೆ ರೂಪದಲ್ಲಿ ಸಂದಾಯವಾಗುತ್ತಿತ್ತು.
ಶತಮಾನದ ಹಿಂದಿನಿಂದಲೇ ಇಲ್ಲಿ ನೇಮೋತ್ಸವ ನಡೆಯುತ್ತಿದೆ. ಇಲ್ಲಿಯವರೆಗೆ ನೇಮೋತ್ಸವ ಕಾಲಕ್ಕೆ ಯಾವುದೇ ಸೂತಕಾದಿ ಅಡಚಣೆಗಳು ಬಂದೊದಗಿದ ಸನ್ನಿವೇಶವೇ ಎದುರಾಗದಿರುವುದು ಕ್ಷೇತ್ರದ ಇನ್ನೊಂದು ಮಹಿಮೆ ಎನ್ನಬಹುದು.
ನೇಮೋತ್ಸವದ ದಿನ ರಾತ್ರಿ 7.30 ಸಮಯಕ್ಕೆ ಇಲ್ಲಿ ಅನ್ನಸಂತರ್ಪಣೆ ಆರಂಭವಾಗುತ್ತದೆ. ಮಧ್ಯರಾತ್ರಿಯವರೆಗೂ ನಿರಂತರ ಅನ್ನಪ್ರಸಾದ ನೀಡಲಾಗುತ್ತಿದ್ದು, ಪ್ರತೀ ವರ್ಷ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಆಗಮಿಸಿ ದೈವಗಳ ಪ್ರಸಾದ ಸ್ವೀಕರಿಸುತ್ತಾರೆ.
ಇತಿಹಾಸ ಸಂಶೋಧಕರ ಅಧ್ಯಯನವೊಂದರ ಪ್ರಕಾರ ಕೋಟಿ ಚೆನ್ನಯರ ಗುರುಗಳಾದ ಸಾಯನ ಬೈದ್ಯರ ವಂಶಸ್ಥರು ಇಲ್ಲಿದ್ದರೆಂದ, ಅವರ ವಂಶಸ್ಥರೇ ಆರಾಧನೆ ಮಾಡಿಕೊಂಡು ಬರುತ್ತಿದ್ದರು ಎಂದು ಹೇಳಲಾಗಿದೆ.
ಪಡುಮಲೆ ಬಿಟ್ಟ ಕೋಟಿ ಚೆನ್ನಯರು ಇಲ್ಲಿ ಬಂದು ಕುಳಿತ ಕಾರಣದಿಂದಲೇ ಇಲ್ಲಿ ವರ್ಷದ ಪ್ರಥಮ ಬೈದೇರುಗಳ ನೇಮೋತ್ಸವ ನಡೆಯುತ್ತಿದೆ. ಬಹಳ ವರ್ಷಗಳ ಹಿಂದೆ ಬೈದೇರುಗಳಿಗೆ ಕೇವಲ ತಂಬಿಲ ಸೇವೆ ನಡೆಯುತ್ತಿತ್ತು. ಬೈದೇರುಗಳಿಗೆ ನೇಮೋತ್ಸವ ಆರಂಭವಾದುದೇ ಇಲ್ಲಿ ಎಂದು ಹೇಳಲಾಗಿದೆ. ಜಿಲ್ಲೆಯ ಅತ್ಯಂತ ಪ್ರಾಚೀನ ಗರಡಿ ಇದಾಗಿದ್ದು, ಇಲ್ಲಿ ಆದಿ ಉತ್ಸವ ನಡೆಯುತ್ತದೆ. ಪೆರಾರ್ದೆ ತಿಂಗಳ ಹುಣ್ಣಿಮೆಯ ದಿನದಂದು ಇಲ್ಲಿ ಪ್ರತೀವರ್ಷ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ.
























