ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸ ಮುಂದೆ ಜ. 1ರಂದು ರಾತ್ರಿ ನಡೆದಿದ್ದ ಗುಂಡಿನ ದಾಳಿ ಹಾಗೂ ಕಾಂಗ್ರೆಸ್ ನ ಓರ್ವ ಕಾರ್ಯಕರ್ತ ಸಾವನ್ನಪ್ಪಿದ ಪ್ರಕರಣದಲ್ಲಿ ಅಧಿಕಾರ ವಹಿಸಿಕೊಂಡ ದಿನವೇ ಸಸ್ಪೆಂಡ್ ಆಗಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ್ ಅವರು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ.
ಜ. 2ರಂದು ಸಸ್ಪೆಂಡ್ ಆಗಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ್ ಅವರು ತುಮಕೂರಿನ ಶಿರಾದಲ್ಲಿರುವ ಅವರ ಸ್ನೇಹಿತರ ಫಾರ್ಮ್ ಹೌಸ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರ ಸ್ನೇಹಿತರು, ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ. ಈ ಮಾಹಿತಿ ಸುಳ್ಳು ಎಂದು ಹೇಳಿದ್ದಾರೆ.
ಪವನ್ ಅವರಿಗಿಂತ ಮುಂಚೆ ಬಳ್ಳಾರಿಯ ಎಸ್ಪಿ ಆಗಿದ್ದ ಡಾ. ಶೋಭಾರಾಣಿಯವರು ಇದೇ ಜ. 1ರಂದು ಅಲ್ಲಿಂದ ವರ್ಗಾವಣೆಗೊಂಡು ಮಂಡ್ಯ ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಅದೇ ದಿನದಂದು ಬೆಳಗ್ಗೆ ಪವನ್ ನೆಜ್ಜೂರು ಅವರು ಬಳ್ಳಾರಿಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬೆಳಗ್ಗೆಯೇ ಅವರು ಬಳ್ಳಾರಿಯ ಗ್ರಾಮದೇವತೆಯಾದ ದುರ್ಗಮ್ಮ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವಿಗೆ ಪೂಜೆ ಸಲ್ಲಿಸಿದ್ದರು. ಆದರೆ, ಅದೇ ದಿನ ಸಂಜೆ ಹೊತ್ತಿಗೆ ಜನಾರ್ದನ ರೆಡ್ಡಿಯವರ ನಿವಾಸದ ಮುಂದೆ ಗಲಾಟೆಯಾಗಿ, ತಡರಾತ್ರಿ ಗುಂಡಿನ ದಾಳಿ ಹಾಗೂ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದರು. ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿತ್ತು.

























