ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ದಾಮೋದರ ಗೌಡ ಇವರು ಮಧ್ಯ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಉದ್ಯೋಗದಲ್ಲಿದ್ದರು, ಕಳೆದ ಡಿಸೆಂಬರ್ 28 ರಂದು ಹೃದಯಾಘಾತದಿಂದ ನಿಧನರಾದರು.
ಆದರೆ ಗೊತ್ತು ಪರಿಚಯ ಇಲ್ಲದ ಪರದೇಶದಿಂದ ಮೃತ ದೇಹ ಮನೆಗೆ ತರುವುದು ಹೇಗೆ ಎಂಬ ವೇದನೆ ಮನೆಯವರಿಗೆ. ಈ ಸಮಯದಲ್ಲಿ ನೆರವಿಗೆ ಬಂದವರು ದಕ್ಷಿಣ ಕನ್ನಡ ಜಿಲ್ಲೆಯ ನೆಚ್ಚಿನ ಸಂಸದರಾದ ಬ್ರಿಜೇಶ್ ಚೌಟರವರು. ಮಾನ್ಯ ಸಂಸದರನ್ನು ಫೋನ್ ಕರೆಯ ಮೂಲಕ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದಾಗ, ಕೂಡಲೇ ಸ್ಪಂದಿಸಿ ಅಲ್ಲಿನ ರಾಯಭಾರ ಕಚೇರಿ ಜೊತೆ ಸಂಪರ್ಕ ಸಾಧಿಸಿ ದೇಹವನ್ನು ಆದಷ್ಟು ಬೇಗ ಊರಿಗೆ ತಲುಪಲು ಸಹಾಯ ಮಾಡಿದರು.
ಅಲ್ಲಿನ ವೈದ್ಯಕೀಯ ವೆಚ್ಚ, ವಿಮಾನದ ವೆಚ್ಚ ಮತ್ತಿತರ ಖರ್ಚುಗಳನ್ನು ಭರಿಸಲು ಕುಟುಂಬ ಸಾದ್ಯವಾಗಲಿಲ್ಲ. ಆ ಸಮಯದಲ್ಲಿ ಅಲ್ಲಿ ನೆಲೆಸಿರುವ ಭಾರತೀಯ ಬಂಧುಗಳು ಬಹಳಷ್ಟು ಸಹಾಯಹಸ್ತ ನೀಡಿ ಸುಮಾರು ರೂ.8ಲಕ್ಷಕ್ಕೂ ಹೆಚ್ಚು ಹಣದ ಅವಶ್ಯಕತೆಯನ್ನು ನಿಭಾಯಿಸಿ ಮೃತದೇಹವನ್ನು ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿದರು.
ಬೆಂಗಳೂರಿನಿಂದ ಪುನಃ ಅಂಬ್ಯುಲೆನ್ಸ್ ಮೂಲಕ ತರಲು ಕುಟುಂಬದವರಿಗೆ ಕಷ್ಟವಾದಾಗ ನೆರವಿಗೆ ಬಂದವರು ಬೆಳ್ತಂಗಡಿ ಶಾಸಕರಾದ ಮಾನ್ಯ ಹರೀಶ್ ಪೂಂಜರವರು. ಮನೆಯವರ ಅಸಹಾಯಕತೆಯನ್ನು ಅರಿತ ಮಾನ್ಯ ಶಾಸಕರು ಅಂಬ್ಯುಲೆನ್ಸ್ ವ್ಯವಸ್ಥೆಯ ಜವಬ್ದಾರಿ ಹೊತ್ತರು.
ಈ ಮೂಲಕ ವಿದೇಶದಲ್ಲಿ ನಿಧನರಾದ ದಾಮೋದರರ ಮೃತ ದೇಹ ಊರಿಗೆ ತರುವಲ್ಲಿ ಸಹಕರಿಸಿದ ನಮ್ಮೂರ ಹೆಮ್ಮೆಯ ಸಂಸದ ಮತ್ತು ಶಾಸಕರಿಗೆ ಕುಟುಂಬದ ಪರವಾಗಿ ಧನ್ಯವಾದಗಳು ಸಲ್ಲಿಸಿದರು.


























