ಹೊಸ ದಿಲ್ಲಿ: ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡುವ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕಂಡು ಬರುತ್ತಿತ್ತು. ಆದರೆ, ಇದೀಗ ಪ್ರಧಾನಿ ಮೋದಿ ಅವರ ಫೋಟೋ ತೆಗೆದು ಹಾಕಲಾಗಿದೆ. ‘ಭಾರತೀಯರು ಎಲ್ಲರೂ ಒಟ್ಟಾಗಿ ಕೋವಿಡ್ – 19’ ಮಣಿಸೋಣ ಎಂಬ ಆಶಯ ಹಾಗೂ ಘೋಷ ವಾಕ್ಯ ಹೊಂದಿರುವ ಕೋವಿನ್ ಆಪ್‌ನಲ್ಲಿ ಲಸಿಕೆ ಪಡೆದವರು ತಮ್ಮ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಇತ್ತು. ಈ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಇತ್ತು. ಆದರೆ ಇದೀಗ ಘೋಷ ವಾಕ್ಯ ಮಾತ್ರ ಇದೆ. ಪ್ರಧಾನಿ ಮೋದಿ ಅವರ ಫೋಟೋ ತೆಗೆಯಲಾಗಿದೆ.
ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳ ಪ್ರಕಾರ ಪ್ರಧಾನಿ ಮೋದಿ ಅವರ ಫೋಟೋವನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತೆಗೆಯಲಾಗಿದೆ. 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ನೀತಿ ಸಂಹಿತೆಯ ನಿಯಮಗಳನ್ನು ರೂಪಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಹಾಗೆ ನೋಡಿದರೆ, ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಏಕೆ ಬೇಕು ಎಂದು 2021ರಲ್ಲಿ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಭಿನ್ನಾಭಿಪ್ರಾಯಗಳ ನಡುವೆಯೂ ದೇಶದ ಪ್ರಧಾನಿ ಬಗ್ಗೆ ಹೆಮ್ಮೆ ಇರಲಿ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಇದೀಗ ಆರೋಗ್ಯ ಸಚಿವಾಲಯ ವ್ಯತಿರಿಕ್ತ ನಿಲುವು ಕೈಗೊಂಡಿದೆ.
ಆಸ್ಟ್ರಾಜೆನಿಕಾ ಹಾಗೂ ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ತಯಾರಿಸಲಾದ ಕೋವಿಡ್ ಲಸಿಕೆ ಫಾರ್ಮುಲಾವನ್ನೇ ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಸೀರಮ್ ಇನ್ಸ್‌ಸ್ಟಿಟ್ಯೂಟ್ ಸಂಸ್ಥೆ ಉತ್ಪಾದಿಸಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೋವಿಡ್ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಅವರ ಫೋಟೋ ಮಾಯವಾಗಿದೆ. ಲಸಿಕೆ ವಿವಾದದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಬಹುದು ಅನ್ನೋ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೆಟ್ಟಿಗರು ವಿಶ್ಲೇಷಿಸಿದ್ದರು. ಆದರೆ ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಪ್ರಧಾನಿ ಮೋದಿ ಅವರ ಫೋಟೋ ತೆಗೆಯಲಾಗಿದೆ ಎಂದು ಹೇಳಿದೆ.